ನೀರು

ನೀರು

ನೀರಿಗೆ ಭೂಮಿಯ ಉಬ್ಬುತಗ್ಗುಗಳೆಷ್ಟು ಗೊತ್ತೋ,
ಊರು - ಕೇರಿಯ ಮಧ್ಯದ ತಲೆಮಾರುಗಳಷ್ಟು ಹಳೆಯ
ಸಂಘರ್ಷವೂ ಗೊತ್ತು.
ಬಾವಿ ಕಟ್ಟೆಯ ಮೇಲಿನ ನೀರಿನ ಪಸೆ ಹೇಗೆ ಎಂದೂ ಆರುವುದಿಲ್ಲವೋ,
ಹಾಗೆಯೇ ಅಸ್ಪೃಶ್ಯತೆ ಎಂದೂ ಅಂತ್ಯಗೊಳ್ಳುವುದಿಲ್ಲ ಎಂಬುದು ಅದಕ್ಕೆ ಗೊತ್ತು.

ನೀರಿಗೆ ಎಲ್ಲವೂ ಗೊತ್ತು.
ಯಾಹೂದಿ ಯೇಸು ಮತ್ತವನಿಗೆ ಕುಡಿಯಲು ನೀರು ಕೊಟ್ಟ
ಸಮಾರಿಯ ಮಹಿಳೆಯ ಜನಾಂಗದ ಬಗ್ಗೆ ಗೊತ್ತು
ಚರ್ಮ ಮತ್ತು ದಾರದುಂಡೆಯ ಉಪಜಾತಿ ಗೊತ್ತು.

ನೀರಿಗೆ,
ಬಾವಿಯಿಂದ ನೀರು ಸೇದಲು ಅಧಿಕಾರವಿಲ್ಲದೆ
ಹಗಲಿಡೀ ಬಾವಿ ಕಟ್ಟೆಯ ಬಳಿ ಕೊಡ ಹಿಡಿದು
ಶೂದ್ರನಿಗೆ ಕಾಯುತ್ತಾ ನಿಂತಿರುವ
ಪಂಚಮನ ಎದೆಯ ನೋವು ಗೊತ್ತು.

ನೀರಿಗೆ,
ಕೇರಿಯ ಹೆಣ್ಣುಮಗಳೊಬ್ಬಳು
ಗಂಟಲ ಪಸೆ ಆರಿಸಿಕೊಳ್ಳಲು ಕೈಚಾಚಿದಾಗ
ಅವನು ದೂರದಿಂದ ಸುರಿಯುವ ನೀರು
ಬೊಗಸೆಗೆ ಬೀಳದೆ ನೆಲಕ್ಕೆ ಬಿದ್ದು ಅವಳ ಪಾದ ಮುಟ್ಟಿದಾಗ
ಆಗುವ ಅವಮಾನ ಗೊತ್ತು.

ನೀರಿಗೆ,
ಕೆರೆಯಿಂದ ನೀರು ತುಂಬುವುದನ್ನು ವಿರೋಧಿಸಿದ
ಕಮ್ಮ ಭೂ ಒಡೆಯರ ಮೇಲೆ ಕೊಡದಿಂದ ಹರಿಹಾಯ್ದ
ಕರಮಚೇಡು ಸುವರ್ತಮ್ಮನ ಸಾತ್ವಿಕ ಸಿಟ್ಟು ಗೊತ್ತು.

ನೀರು,
ಶತಮಾನಗಳ ಸಾಮಾಜಿಕ ಅಸಮಾನತೆಯ ಮೂಕ ಸಾಕ್ಷಿ

ನೀರನ್ನು ನೋಡಿದಾಗೆಲ್ಲ ನನಗೆ,
ನನ್ನ ಕೇರಿಯ ಜನ ಒಂದು ಲೋಟ ನೀರಿಗಾಗಿ
ದಿನವಿಡೀ ಸಂಜೆಯಾಗುವುದನ್ನು ಕಾಯುತ್ತಿದ್ದುದು ನೆನಪಾಗುತ್ತದೆ.

ನಮಗೆ ನೀರಂದರೆ ಕೇವಲ H20 ಅಲ್ಲ
ನಮಗೆ ನೀರೆಂದರೆ ಅದೊಂದು ಘೋರ ಹೋರಾಟ
ಚಾದರ್ ಕೆರೆಯ ಮಹಾಡ್ ಹೋರಾಟದ ಹಾಗೆ
ಹನಿ ನೀರಿಗಾಗಿ ನಮ್ಮ ಹಲವು ತಲೆಮಾರುಗಳು ಸುರಿಸಿದ ಕಣ್ಣೀರು.
ಹಲವು ಹೋರಾಟಗಳಲ್ಲಿ ಕೇವಲ ಹನಿ ನೀರಿಗಾಗಿ
ನಮ್ಮ ರಕ್ತ ನದಿಯಂತೆ ಹರಿದಿದೆ.
ಆದರೂ ನಮಗೆ ಬೊಗಸೆ ನೀರನ್ನೂ ಗೆಲ್ಲಲು ಸಾಧ್ಯವಾಗಿಲ್ಲ.

ನೀರನ್ನು ನೋಡಿದಾಗೆಲ್ಲ ನನಗೆ,
ಇಡೀ ಊರು ದಿನಕ್ಕೆರಡು ಬಾರಿ ಅದ್ಧೂರಿ ಸ್ನಾನ ಮಾಡುವಾಗ 
ನಾವು ವಾರದ ಸ್ನಾನವನ್ನು ಊರ ಹಬ್ಬದ ಥರ
ಆಚರಿಸುತಿದ್ದುದು ನೆನಪಾಗುತ್ತದೆ.

ನೀರನ್ನು ನೋಡಿದಾಗೆಲ್ಲ ನನಗೆ,
ಮೈಲಿಗಟ್ಟಲೆ ನಡೆದು, ದೊಡ್ಡ ಕಾಲುವೆ ತಲುಪಿ,
ಕುತ್ತಿಗೆಯ, ಸೊಂಟದ ನರನಾಡಿಗಳೆಲ್ಲ ಕಿತ್ತುಹೋಗುವ ಹಾಗೆ
ಕೊಡಗಳನ್ನು ಹೊತ್ತು ನೀರು ತಂದ ನನ್ನ ಬಾಲ್ಯ ನೆನಪಾಗುತ್ತದೆ

ನನಗೆ, ಕೊಡ ನೀರಿಗಾಗಿ ಮಲಪಲ್ಲೆಯ
ಹುಲ್ಲುಹೊದಿಕೆಯ ಮನೆಗಳು ಸುಟ್ಟು
ಬೂದಿಯಾದದ್ದು ನೆನಪಾಗುತ್ತದೆ.

ನೀರು ಸಾಮಾನ್ಯವಾದುದಲ್ಲ.
ಅದು ಜೀವ ಕೊಡುತ್ತದೆ.
ಜೀವವನ್ನು ಸರ್ವನಾಶ ಮಾಡುತ್ತದೆ ಕೂಡ.
ಕೆಲವೊಮ್ಮೆ ಒಣಗಿದ ಗಂಟಲುಗಳನ್ನು ತಣಿಸಲು
ಶಕ್ತಿ ಇಲ್ಲದ ನೀರು, ಕೊಲ್ಲುವ ಸುನಾಮಿ ಅಲೆಯಾಗಿ
ಹಳ್ಳಿಗಳ ಮೇಲೆ ಹಳ್ಳಿಗಳನ್ನು ನುಂಗಿಬಿಡುತ್ತದೆ.

ನೀರಿನ ಕ್ರೂರ ಕೈಗಳಲ್ಲಿ ಬಡವರು ಆಟಿಕೆಯಗುತ್ತಾರೆ.
ಹಲವು ಬಾರಿ ನೀರು ಹಳ್ಳಿಗಳನ್ನು
ಒಂದೋ ಮರುಭೂಮಿಯಾಗಿಸುತ್ತೆ ಅಥವಾ
ಪ್ರವಾಹದಲ್ಲಿ ಮುಳುಗಿಸಿಬಿಡುತ್ತೆ.

ಇದೆ ನೀರು,
ಊರು-ಕೇರಿಯ ನಡುವೆ
ರಾಜ್ಯ- ರಾಜ್ಯದ ನಡುವೆ
ಹಲವು ಹೋರಾಟಗಳನ್ನು - ಸಂಘರ್ಷಗಳನ್ನು ಹೊತ್ತಿಸಿದೆ.
ರಕ್ತವನ್ನು ಹೊಳೆಯಂತೆ ಹರಿಸಿದೆ.
ತಾನು ಮಾತ್ರ ಮುಗ್ದನಂತೆ ಬಿಸ್ಲೇರಿ ಬಾಟಲಿಯಲ್ಲಿ ಕುಳಿತಿದೆ.

ನಮ್ಮನ್ನು ಸರ್ಕಸ್ಸಿನಲ್ಲಿ ಕುಣಿಸುವಂತೆ ಕುಣಿಸುವ
ಇದೇ ನಮ್ಮ ಬಾವಿಯ ನೀರು
ತಾನು ಮಾತ್ರ ಯಾವುದೇ ಸದ್ದು ಗದ್ದಲವಿಲ್ಲದೆ ಕುಣಿಯುತ್ತ
ಪೆಪ್ಸಿ ಮನುಷ್ಯನ ಬಾಟಲಿ ಸೇರಿದೆ.
'ಮಿನರಲ್ ವಾಟರ್' ಎಂಬ ಹೊಸ ಹೆಸರಿನೊಂದಿಗೆ
ಆಕಾಶಕ್ಕೇರಿದೆ, ಬಿರುಗಾಳಿ ಎಬ್ಬಿಸಿದೆ.

ಇಂತಿಪ್ಪ ನೀರು ಒಂದು ಕೇವಲವಾದ ವಸ್ತು ಅಲ್ಲ
ಈಗದು ಬಹುರಾಷ್ಟ್ರೀಯ ಸರಕು

ಎಲ್ಲರೂ ಹೇಳುವ ಹಾಗೆ
ನೀರು ಸರ್ವಾಂತರ್ಯಾಮಿ.
ಜಗತ್ತಿನಲ್ಲೆಲ್ಲ ನೀರಿದೆ
ನೀರು, ಇಡೀ ಜಗತ್ತನ್ನು ತನ್ನಲ್ಲಿ ಅಡಗಿಸಿಕೊಂಡಿದೆ 

ತೆಲುಗು ಮೂಲ: ಚಲ್ಲಪಲ್ಲಿ ಸ್ವರೂಪರಾಣಿ
ಇಂಗ್ಲಿಷಿಗೆ: ಉಮಾ ಭ್ರುಂಗುಬಂಧ (Water)
ಕನ್ನಡಕ್ಕೆ: ಪರಶುರಾಮ ನಾಗೋಜಿ

Comments