ದೀಪಾವಳಿ, ಹಣತೆ ಮತ್ತು ಕವಿತೆ


ಕನ್ನಡದ ಹಣತೆ ಕವಿ ಎಂದೇ ಪ್ರಸಿದ್ಧರಾಗಿರುವ ಜಿ.ಎಸ್.ಶಿವರುದ್ರಪ್ಪ ಅವರ ಎರಡು ಕವಿತೆಗಳು ಮತ್ತು ಕೆ.ಎಸ್.ನರಸಿಂಹಸ್ವಾಮಿಯವರ ಒಂದು ಕವನ, ಹಣತೆಯೊಂದನ್ನ ನೋಡಿದಾಗ, ದೀಪಾವಳಿ-ಕಾರ್ತೀಕ ಮಾಸ ಬಂದಾಗ ಸದಾ ನೆನಪಾಗುವ, ಕಾಡುವ ಕವಿತೆಗಳು.
ಮೊದಲನೆಯದು, 1947-51ರಲ್ಲಿ ಪ್ರಕಟವಾದ ಸಾಮಗಾನ ಕವನ ಸಂಕಲನದ ಹಣತೆ
ಎರಡನೇ ಕವನ 1966-72ರಲ್ಲಿ ಪ್ರಕಟಗೊಂಡ ಗೋಡೆ ಕವನ ಸಂಕಲನದ 'ನನ್ನ ಹಣತೆ'

ಮತ್ತೊಂದು ಕವಿತೆ ಪ್ರೇಮ ಕವಿ, ದಾಂಪತ್ಯ ಕವಿ ಎಂದೇ ಪ್ರಸಿದ್ಧರಾಗಿರುವ ಕೆ.ಎಸ್.ನರಸಿಂಹಸ್ವಾಮಿಯವರ ದೀಪಾವಳಿ ಕವನ.

ಹಣತೆ
ಜಿ.ಎಸ್.ಎಸ್. ಶಿವರುದ್ರಪ್ಪ

ಮುರುಕು ಗುಡಿಸಲಲಿ
ಕಿರಿಹಣತೆ ಬೆಳಗುತಿದೆ
ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ !
ಬಡವರಾತ್ಮದ ಹಣತೆ
ಇಂತೆ ಬೆಳಗುವುದಲ್ತೆ
ಅಜ್ಞಾತವಾಸದಲಿ ದೀನವಾಗಿ.

ಅಲ್ಲಿ ಸೌಧಗಳಲ್ಲಿ
ಬೀದಿ ಸಾಲುಗಳಲ್ಲಿ
ಮಿಂಚುಸೊಡರುಗಳೆನಿತೊ ಶೋಭಿಸಿರೆ ಕೋಟಿ.
ಧ್ಯಾನಗಾಂಭೀರ್ಯದಲಿ
ಮತ್ತೆ ಸರಳತೆಯಲ್ಲಿ
ಯಾವುದೀ ಬಡಗುಡಿಲ ಸೊಡರುರಿಗೆ ಸಾಟಿ ?

ಯಾವ ಚಂದ್ರಾದಿತ್ಯ ತಾರೆಗಳಿಗಿದು ಹೀನ,
ಇಲ್ಲಿ ಬೆಳಗುತ್ತಿರುವ ಹಣತೆಗಿಹ ಸ್ಥಾನ ?
ಸೂರ್ಯನೋ ಹಿರಿಸೊಡರು ಭುವನ ಭವನಕ್ಕೆ
ಹಣತೆಯೋ ಕಿರಿಸೊಡರು ಮಣ್ಣು ಗುಡಿಸಲ್ಗೆ.

ಯಾವ ಚಿತ್ಶಕ್ತಿಯದು
ಸೂರ್ಯನಲಿ ಬೆಳಕಾಗಿ
ತಾರೆಯಲಿ ಹೊಳಪಾಗಿ
ಬೆಂಕಿಯಲಿ ಬಿಸಿಯಾಗಿ ಪ್ರವಹಿಸಿಹುದೋ,

ದಿವ್ಯಶಕ್ತಿಯೇ ಮಣ್ಣ ಹಣತೆಯಲಿ
ಹರಿಯುತಿರೆ, ಕಿರಿಹಣತೆ ಕಿರಿದಾದರೇನು ?
ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು ?

ಈ ಕವನ ಸೂರ್ಯ, ಚಂದ್ರ ಹಾಗೂ ಶ್ರೀಮಂತರ ಮನೆಗಳಲ್ಲಿ ಬೆಳಗುವ ದೀಪಗಳಿಗಿಂತ ಬಡವರ ಮನೆಯ ಮಣ್ಣ ಹಣತೆ ಯಾವುದರಲ್ಲಿ ಕಮ್ಮಿ ಎಂದು ಪ್ರಶ್ನಿಸುತ್ತಾ ಸಾಗುತ್ತದೆ. ಬಡವರ ಗುಡಿಸಲಲ್ಲಿ ಬೆಳಗುವ ಹಣತೆಯು ಅವರ ಆತ್ಮದ ಹಣತೆಯ ರೂಪಕವಾಗಿದ್ದು ಸದಾ ಅವರಂತೆಯೆ ಅಜ್ಞಾತವಾಸದಲ್ಲಿ ಕಾಲಕಳೆಯುತ್ತದೆ ಎಂದು ಪ್ರಾರಂಭವಾಗುವ ಈ ಕವನವು ಧ್ಯಾನ, ಗಾಂಭೀರ್ಯತೆ ಮತ್ತು ಸರಳತೆಗೆ ಬಡಗುಡಿಸಲ ಈ ದೀಪಕ್ಕೆ ಸಾಟಿಯಾಗುವ ಶಕ್ತಿ ಜಗತ್ತಿನ ಯಾವ ಬೆಳಕಿಗೂ ಇಲ್ಲ ಎನ್ನುತ್ತದೆ. ಹಾಗಾಗಿ ಇದು ಯಾವ ಚಂದ್ರ, ಸೂರ್ಯ, ನಕ್ಷತ್ರಗಳಿಗೆ ಕಮ್ಮಿ? ಸೂರ್ಯ ಇಡೀ ಭುವನದ ಮನೆಗೆ ಹಣತೆಯಾದರೆ ಬಡವರ ಮನೆಯ ಪ್ರಪಂಚಕ್ಕೆ ಈ ಮಣ್ಣ ಹಣತೆಯೇ ಸೂರ್ಯ ಹಾಗಾಗಿ ಸೂರ್ಯನಲ್ಲಿ ಬೆಳಕಾಗಿ, ನಕ್ಷತ್ರಗಳಲ್ಲಿ ಹೊಳಪಾಗಿ, ಬೆಂಕಿಯೊಳಗಿನ ಬಿಸಿಯಾಗಿ ಪ್ರವಹಿಸುವ ಶಕ್ತಿಯೇ ಈ ಮಣ್ಣಿನ ಹಣತೆ ಬೆಳಗುವುದಕ್ಕೆ ಕಾರಣವಾಗಿರುವಾಗ ಹಣತೆ ಸಣ್ಣದಾದದರೇನು ಅದು ಕೊಡುವ ಬೆಳಕು ದೊಡ್ಡದಲ್ಲವೇನು ಎಂದು ಪ್ರಶ್ನೆ ಮಾಡುತ್ತದೆ.

ನನ್ನ ಹಣತೆ
ಜಿ.ಎಸ್.ಎಸ್. ಶಿವರುದ್ರಪ್ಪ

ಹಣತೆ ಹಚ್ಚುತ್ತೇನೆ ನಾನೂ,
ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ,

ಹಣತೆ ಹಚ್ಚುತ್ತೇನೆ ನಾನೂ;
ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
"ತಮಸೋ ಮಾ ಜ್ಯೋತಿರ್ಗಮಯಾ" ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.

ಜಿ.ಎಸ್.ಎಸ್. ಅವರ ಅತಿ ಹೆಚ್ಚು ಪ್ರಸ್ತಾಪಿತ ಕವನಗಳಲ್ಲಿ ಒಂದು 'ನನ್ನ ಹಣತೆ'. ಈ ಕವನದಲ್ಲಿ ಬಳಕೆಯಾಗಿರುವ 'ನಾನೂ' ಶಬ್ದ ಅತ್ಯಂತ ರೋಚಕ ಪ್ರಯೋಗಗಳಲ್ಲಿ ಒಂದು. ಎಲ್ಲರಂತೆ ನಾನೂ ಹಚ್ಚುತ್ತೇನೆ ಹಣತೆಯನ್ನು ನನಗೆ ನಾ ಹಚ್ಚುವ ಹಣತೆ ಇಡೀ ಜಗತ್ತಿನ ಕತ್ತಲನ್ನು ಓಡಿಸುವ ಭ್ರಮೆಯಿಂದ ಅಲ್ಲ ಎನ್ನುತ್ತಾರೆ ಕವಿ. ಯಾಕೆಂದರೆ ಅವರಿಗೂ ಗೊತ್ತು ಎಷ್ಟೇ ದೀಪಗಳನ್ನು ಹಚ್ಚಿದರೂ ಕೊನೆಗೆ ಗೆಲ್ಲುವುದು ಕತ್ತಲೆಯೇ! ಈ ಕವನದ ಇನ್ನೊಂದು ವಿಶೇಷತೆಯೆಂದರೆ, ಎಲ್ಲರಂತೆ 'ನಾನೂ' ಎಂದು ಕವಿ ಹಣತೆಯನ್ನೇನೋ ಹಚ್ಚುತ್ತಾರೆ. ಆದರೆ ಎಲ್ಲರಂತೆ ಅವರಿಗೆ ತಾವು ಹಚ್ಚುವ ಹಣತೆಯ ಬಗ್ಗೆ ಭ್ರಮೆಯಾಗಲಿ, ಮಹತ್ವಾಕಾಂಕ್ಷೆಯಾಗಲಿ ಇಲ್ಲ! ಇದು ಈ ಕವನದ ವಿರೋಧಾಭಾಸ. ಯಾಕೆಂದರೆ ಎಲ್ಲರೂ ತಾವು ಹಚ್ಚುವ ಹಣತೆಯ ಬಗ್ಗೆ ಅತೀವ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರೆ, ಕವಿ ತಾನು ಹಚ್ಚುವ ಹಣತೆಯ ಕಾರಣವೇ ಬೇರೆ ಎನ್ನುತ್ತಾರೆ ಮತ್ತು ಆ ಕಾರಣವನ್ನು ಕವನದ ಕೊನೆಯ ಸಾಲುಗಳಲ್ಲಿ ಹೇಳುತ್ತಾರೆ. ಓದಲು ತುಂಬಾ ಸರಳವೆನಿಸುವ ಈ ಕವನ ಧ್ವನಿಸುವ ಅರ್ಥ ಮಾತ್ರ ಅನಂತವಾದದ್ದು. ನಮ್ಮ ಬದುಕಿನ ನಿರೀಕ್ಷೆ, ಅತಿ ಆಸೆ, ಹಂಬಲ, ಮಹತ್ವಾಕಾಂಕ್ಷೆಗಳನ್ನು ನನ್ನ ಹಣತೆ ತಣ್ಣಗೆ ಪ್ರಶ್ನಿಸುತ್ತದೆ.

ದೀಪಾವಳಿ
ಕೆ.ಎಸ್.ನರಸಿಂಹಸ್ವಾಮಿ

ನಕ್ಕಂತೆ ಇರುವ ಸಿರಿಮೊಗವೆ! -ಅದಕೆ
ತಕ್ಕಂತೆ ಇರುವ ಕಣ್ಬೆಳಕೆ!-
ನಿಂತಂತೆ ಕಾಣುವ ನಿರಾತಂಕ ದೀಪವೆ!
ಅಂತರಂಗದ ಜೀವ ನದಿಯೆ!

ನಕ್ಕಂತೆ ಇರುವ ಸಿರಿಮೊಗವೆ! -ಹೂಗೆನ್ನೆ-
ಗುಕ್ಕುವಂತಿರುವ ನೊರೆಹಾಲೆ!
ತಂತಿಯಲಿ ಇಂಪು ಹರಿದಂತೆ ಮನೆಯೊಳಗೆ
ಸಂತಸವ ನೆಲೆಯಾದ ಚೆಲುವೆ!

ನಕ್ಕಂತೆ ಇರುವ ಸಿರಿಮೊಗವೆ! -ಚೆಂದುಟಿಗೆ
ಚಿಮ್ಮಿಬಹ ವೀಣೆಯೊಳದನಿಯೆ!
ತುಂಬು ಹೆರಳಲಿ ಹಿಡಿದ ಹಂಬಲದ ಹೊಸ ಹೂವೆ,
ಅಲ್ಲೆಲ್ಲ ನಿನ್ನ ಪರಿಮಳವೆ!

ದೀಪವನು ಹಚ್ಚಿ ಬಹ ಹೆಣ್ಣೆ! - ಬೆರಳೆ
ಮಿಂಚಿನಲಿ ಬಳ್ಳಿ ಬರೆದಂತೆ.
ಹಣತೆಗಳ ನಡುವೆ ಹೊಂಬೆರಳು ಹರಿದಾಡುತಿದೆ
ವೀಣೆಯಲಿ ಬೆರಳು ಬರುವಂತೆ.

ಎಷ್ಟೊಂದು ತಾರೆಗಳು ಮೇಲೆ, ಗಗನದಲಿ!-
ಎಷ್ಟೊಂದು ಬೆಳಕು ಭೂಮಿಯಲಿ!
ಹಬ್ಬದಲಿ ತೊಳೆದಿಟ್ಟ ಬದುಕೆ ಬೆಳಕಾಗಿ
ಹೂವಾಯ್ತು ನಿನ್ನ ಪ್ರೇಮದಲಿ.

ಹಣತೆಯನು ಹಚ್ಚಿ ಬಿಡು, ಬಾಗಿಲಲಿ ಇಟ್ಟು ಬಿಡು;
ನಿನ್ನಿಂದ ದೀಪಾವಳಿ.
ಬರುವ ಸಡಗರದಲ್ಲೆ ಮುತ್ತೊಂದ ಕೊಟ್ಟು ಬಿಡು,
ಕೊಡೆನೆಂದು ನಗುತ ಹೇಳಿ.

ದೀಪಾವಳಿ ಕವನವು ಕೆ.ಎಸ್.ನ. ಅವರ ಪ್ರಾತಿನಿಧಿಕ ಪ್ರೇಮ ಕವನ. ಮೊದಲ ಸಾಲುಗಳಲ್ಲಿ ತನ್ನವಳನ್ನು ನಿರಾತಂಕ ದೀಪಕ್ಕೆ ಹೋಲಿಸುವ ಕವಿ ನಗುತ್ತಿರುವ ಸಿರಿಮೊಗಕ್ಕೆ ತಕ್ಕ ಹಾಗಿರುವ ಕಣ್ಣ ಬೆಳಕಿನ ಹಣತೆ ತನ್ನವಳು ಅಲ್ಲದೇ ಅವಳೇ ತನ್ನಂತರಂಗದ ಜೀವನದಿ ಎನ್ನುತ್ತಾರೆ. ಓದುಗರ ಮುಖದ ಮೇಲೊಂದು ಚೆಂದದ ನಗು ತರಿಸುವ ಶಕ್ತಿ ಈ ಕವನದ ಸಾಲುಗಳಿಗಿವೆ.  ಹಬ್ಬದಲಿ ತೊಳೆದಿಟ್ಟ ಈ ಬದುಕು ನಿನ್ನ ಪ್ರೇಮದಲ್ಲಿ ಹೂವಾಯ್ತು ಎನ್ನುವ ಕವಿ, ನಿನ್ನಿಂದಲೇ ದೀಪಾವಳಿ (ಹಬ್ಬದ ಸಡಗರ ವಸ್ತು ಆಡಂಬರಗಳಿಂದಲ್ಲ, ವ್ಯಕ್ತಿ-ಸಂಬಂಧಗಳಿಂದ) ಎನ್ನುತ್ತಾರೆ.

ದೀಪಾವಳಿ ಬಂತಲ್ಲ, ಮತ್ತೆ ಇವು ನೆನಪಾದವು. ಹಂಚಿಕೊಂಡೆ.

ಬೆಳಕಿನ ಹಬ್ಬ ಶುಭ ತರಲಿ.





ಆಕರ:
 1. ಹಣತೆ-ಸಾಮಗಾನ-ಜಿ.ಎಸ್.ಶಿವರುದ್ರಪ್ಪ ಸಾಹಿತ್ಯಮಾಲೆ-1 ಸಮಗ್ರ ಕಾವ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು, 2009
2. ನನ್ನ ಹಣತೆ-ಗೋಡೆ-ಜಿ.ಎಸ್.ಶಿವರುದ್ರಪ್ಪ ಸಾಹಿತ್ಯಮಾಲೆ-1 ಸಮಗ್ರ ಕಾವ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು, 2009
3. ಸಂಸ್ಕೃತಿ ಸಲ್ಲಾಪ- 04 ನವೆಂಬರ್ 2013 http://www.sallapa.com/2013/11/blog-post_1957.html

Comments

  1. ಈ ಮೂರು ಕವಿತೆಗಳ ಜೊತೆಗಿಟ್ಟು ಓದುವುದೇ ಸೊಗಸು...

    ReplyDelete

Post a Comment