ಶರಣ ಚಳುವಳಿ ಮತ್ತು ಎರಡು ಕನ್ನಡ ನಾಟಕಗಳು


ಇಂದು ಬಸವ ಜಯಂತಿ. ಬಸವಣ್ಣ ಕನ್ನಡ ನಾಡಿನಲ್ಲಿ ಆಗಿಹೋದ ಮಹಾನ್ ಕ್ರಾಂತಿಯೊಂದರ ಮೂಲಪುರುಷ. ಆತ ಅಂದು ಹಚ್ಚಿದ ಆ ಬೆಳಕು ಒಂದಿಲ್ಲೊಂದು ರೀತಿಯಲ್ಲಿ ಇಂದಿಗೂ ಬೆಳಗುತ್ತಿದೆ. ಆದರೂ ಬಸವಣ್ಣನನ್ನು ನಾವು ಅರ್ಥ ಮಾಡಿಕೊಂಡಿದ್ದೇವೆಯೇ? ಆತನ ಹಳವಂಡಗಳು ನಮಗೆ ಅರ್ಥವಾಗಿವೆಯೆ? ಖಂಡಿತಾ ಇಲ್ಲ. ತನ್ನ ಸಮಕಾಲೀನರಿಗೇ ಬಸವಣ್ಣ ಒಂದು ಅರ್ಥವಾಗದ ಸಂಕೀರ್ಣ ಚಿತ್ರ. ಜೊತೆಗೆ ಬದುಕಿದವರ ಪಾಡೇ ಹಾಗಿರುವಾಗ ಬರೀ ಆತನ ವಚನಗಳನ್ನು, ತತ್ವಗಳನ್ನು ಓದಿಕೊಂಡು ಬಸವಣ್ಣನನ್ನು ಅರ್ಥಮಾಡಿಕೊಂಡಿದ್ದೇವೆ ಅನ್ನುವುದು ಅರ್ಧ ಸತ್ಯ ಮಾತ್ರ.  ಜೊತೆಗೆ ಕಾಲಾನುಕ್ರಮದಲ್ಲಿ ಎಲ್ಲ ಸಿದ್ಧಾಂತಗಳನ್ನು ನಮಗೆ ದಕ್ಕಿದಷ್ಟು ಅರ್ಥಮಾಡಿಕೊಂಡು ಅದನ್ನು ಮುಂದಿನ ಪರಂಪರೆಗೆ ದಾಟಿಸಿಕೊಂಡು ಬರಲಾಗಿದೆ. ಹೀಗಾಗಿ ಬಸವಣ್ಣ ಮತ್ತು ಆತನ ಬದುಕಿನ ರೀತಿ ಇಂದಿಗೂ ನಮ್ಮಲ್ಲಿ ಹಲವರಿಗೆ ದೇವರಾಗಿ ಕಂಡರೆ, ಕೆಲವರಿಗೆ ಕ್ರಾಂತಿ ಪುರುಷ, ಧರ್ಮ ಸಂಸ್ಥಾಪಕ ಮತ್ತು ಕೆಲವರಿಗೆ ಧರ್ಮದ್ರೋಹಿ!

ಕನ್ನಡ ಸಾಹಿತ್ಯ ಲೋಕ ಮತ್ತು ಸಿನೆಮಾ ಲೋಕದಲ್ಲಿ ಬಸವಣ್ಣನ ಬದುಕನ್ನು ಎಲ್ಲರಿಗೂ ಅರ್ಥ ಮಾಡಿಸುವ ಹಲವು ಪ್ರಯತ್ನಗಳು ಯಶಸ್ವಿಯಾಗಿ ನಡೆದಿವೆ. ವಿಶೇಷವಾಗಿ ಕನ್ನಡ ನಾಟಕಗಳಲ್ಲಿ ಗಿರೀಶ್ ಕಾರ್ನಾಡರ ‘ತಲೆದಂಡ’, ಪಿ.ಲಂಕೇಶರ ‘ಸಂಕ್ರಾಂತಿ’ ಮತ್ತು ಎಚ್.ಎಸ್.ಶಿವಪ್ರಕಾಶರ ‘ಶಿವರಾತ್ರಿ’ ಪ್ರಮುಖವಾದವು. ಈ ಲೇಖನದಲ್ಲಿ ತಲೆದಂಡ ಹಾಗೂ ಸಂಕ್ರಾಂತಿ ನಾಟಕಗಳಲ್ಲಿ ಬಸವಣ್ಣನ ಬದುಕು ಹಾಗೂ ಆತನ ಆಲೋಚನೆಗಳನ್ನು ಕಟ್ಟಿಕೊಟ್ಟ ರೀತಿ ಹಾಗೂ ಆತ ಎದುರಿಸಿದ ವಿರೋಧಗಳ ಬಗ್ಗೆ ಇರುವ ಪ್ರಮುಖ ಸಂಭಾಷಣೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಿದ್ದೇನೆ. (ಶಿವರಾತ್ರಿ ನಾಟಕ ನಾ ಓದಿಲ್ಲ ಹಾಗೂ ಈ ಲೇಖನದಲ್ಲಿ ನಾಟಕಗಳ ವಿಮರ್ಶೆಗೂ ಕೈ ಹಾಕುತ್ತಿಲ್ಲ). ಆ ಎರಡು ನಾಟಕಗಳನ್ನು ಓದಿದವರಿಗೆ ಖಂಡಿತವಾಗಿಯೂ ಬಸವಣ್ಣ ತನ್ನ ಕಾಲದ ವಿರೋಧಗಳ ಮಧ್ಯೆ ಕಟ್ಟಲೆತ್ನಿಸಿದ ಸಮ ಸಮಾಜದ ಪರಿಕಲ್ಪನೆ ಹಾಗೂ ಬಸವಣ್ಣನ ಸ್ಥಿತಿಯ ಬಗ್ಗೆ ಮರುಕ ಉಂಟಾಗುವುದು ಸಹಜ. ತನ್ನ ತತ್ವಾದರ್ಶಗಳನ್ನು  ಪರಿಪರಿಯಾಗಿ ಹೇಳಲೆತ್ನಿಸಿದರೂ ಆತನನ್ನು ದೇವರನ್ನಾಗಿಸಿದ ಸಮಾಜದ ಬಗ್ಗೆ ಬಸವಣ್ಣನಿಗೆ ಬಹುಶ: ಮರುಕ ಮತ್ತು ಸಹಜ ನೋವೂ ಕೂಡ ಉಂಟಾಗಿರಬಹುದು. ಅವುಗಳನ್ನು ಹೇಳಿಕೊಳ್ಳಲೆತ್ನಿಸಿದ ಕೆಲವು ಸಂಭಾಷಣೆಗಳನ್ನು ಓದಿಸಬೇಕೆಂಬ ಉದ್ದೇಶವಷ್ಟೇ ಈ ಲೇಖನದ್ದು.



ತಲೆದಂಡ- ಗಿರೀಶ್ ಕಾರ್ನಾಡ

ತಲೆದಂಡ ನಾಟಕದಲ್ಲಿ ಬಿಜ್ಜಳ ತಾನು ಯಾಕೆ ಬಸವಣ್ಣನನ್ನು ಅಷ್ಟಾಗಿ ಹಚ್ಚಿಕೊಂಡಿದ್ದಾನೆ ಎಂಬುದನ್ನು ಹೀಗೆ ವಿವರಿಸುತ್ತಾನೆ:

ಬಿಜ್ಜಳ (ರಾಣಿ ರಂಭಾವತಿಗೆ):
……….. ಜಾತಿ ಅಂದರ ಮೈ ತೊಗಲಿದ್ಧಾಂಗ. ಅದನ್ನು ಸುಲಿದು ಕಿತ್ತು ಒಕ್ಕೊಟ್ಟರೂ, ಹೊಸ ತೊಗಲು ಬಂದ ಗಳಿಗ್ಗೆ ಎಲ್ಲರ ಕಣ್ಣಿಗೆ ಕಾಣುವುದು ಬೀಳೋದು ಅದಾ… ಅದಾ ಹಳೇ ಜಾತಿ. ಇವ ಹೊಲೆಯ. ಇವ ಕ್ಷತ್ರಿಯ. ಇವ ಕುರುಬ. ಇದು ಈ ನಾಡಿನ ಗುಣ, ಈ ನೀರಿನ ಗುಣ!
ನನ್ನ ಈ ಅರವತ್ತೆರಡು ವರ್ಷದ ಆಯುಸ್ಸಿನ್ಯಾಗ ಜಾತಿಯ ಹಂಗಿಲ್ಲದಾ ನನ್ನನ್ನ ಕಣ್ಣಾಗ ಕಣ್ಣಿಟ್ಟು ನೋಡಿದವ ಅಂದರ ಬಸವಣ್ಣ. ಅವ-ಅವನ ಶರಣರು. ತಾಯಾಣೆ ಹೇಳತೀನಿ ಅವರು ಮಾತಾಡಿದರ ನಾನೂ ಒಬ್ಬ ಮನಷ ಅನಸತೈತಿ. ಜಾತಿ ಪದ್ಧತಿಯನ್ನ ಈ ನಾಡಿನಿಂದ ಸವರಿ ಬಿಡತೀನಿ ಅನ್ನತಾನ. ವರ್ಣಾಶ್ರಮ ಧರ್ಮ ಬೇರು ಸಹಿತ ಕಿತ್ತು ಹಾಕತೀನಿ ಅನ್ನತಾನ. ಎಂಥಾ ಕನಸದು! ಎಂಥಾ ಎದಿಗಾರಿಕಿ! ಆಟಾ ಅಲ್ಲ. ತನ್ನ ಸುತ್ತುಮುತ್ತ ಎಂಥೆಂಥಾ ಮಂದೀನ ಕೂಡಿ ಹಾಕ್ಯಾನಂದಿ? ಅಲ್ಲಮ…. ಅವ ಮಾತಾಡೂದು ಕೇಳಿಲ್ಲ ನೀ! ಕನ್ನಡ ಅಲ್ಲ. ಅಮೃತಸ ಸೆಲಿ. ಚನ್ನಯ್ಯ, ಜೇಡರ ದಾಸೀಮಯ್ಯ, ಅಕ್ಕಮಹಾದೇವಿ. ಒಬ್ಬರಾ ಇಬ್ಬರಾ? ಎಲ್ಲ ಒತ್ತಟ್ಟಿಗೆ ಕೂಡತಾರ. ಹಾಕ್ಯಾಡತಾರ, ಹಾಡತಾರ. ಇನ್ಯಾರ ಕೈಲಿ ಇದು ಸಾಧ್ಯ ಇತ್ತು? ಮತ್ತಿದನೆಲ್ಲ ಎಲ್ಲಿ ಮಾಡ್ಯಾನಂದೀ? ಬಿಜ್ಜಳನ ಕಲ್ಯಾಣದಾಗ. ಕಾಶ್ಮೀರದ ಅರಸ ಇಲ್ಲಿ ಬಂದರ ನನ್ನ ಓಲಗಕ್ಕೆ ಬರೂದಿಲ್ಲ. ನೆಟ್ಟಗ ಬಸವಣ್ಣನ ಮಹಾಮನೀಗ ಹೊಕ್ಕಾನು. ಸಣ್ಣ ಮಾತಾತಾ? (ದೃಶ್ಯ 02, ಪುಟ 16, 17)
*****

ಅದೇ ಬಿಜ್ಜಳ ಬಸವಣ್ಣನಿಗೆ ಆತನ ಶರಣರ ಬಗ್ಗೆಯೂ ಎಚ್ಚರಿಸುತ್ತಾನೆ:
ನೀ ಸಣ್ಣಂದಿರ್ತ ಮನಿ ಬಿಟ್ಟು ಓಡಿ  ಹ್ವಾದಿ. ತಿರುಕರು-ತುಡುಗರು-ಸಾಧು-ಸನ್ಯಾಸಿಗಳು-ಇವರನ್ನ ತನ್ನ ಬಳಗ ಅಂತ ನಂಬಿ ಬೆಳದಿ. ನಿನಗ ಮನೀ ಹಂಗಿಲ್ಲ. ಜಾತಿ-ಮತದ ಎಗ್ಗಿಲ್ಲ. ಆದರ ನಿನ್ನ ಶರಣರೂ ಹಂಗಾ ಅಂತ ತಿಳಕೋಬ್ಯಾಡ, ತಮ್ಮ. ನೀರಿನ್ಯಾಗ ಮೀನು ಈಸ್ಯಾಡಿಧಾಂಗ ಅವರೆಲ್ಲ ನೆಂಟರು-ಇಷ್ಟರು-ಬಂಧುಗಳು ಇದರಾಗ ಈಸ್ಯಾಡಿ ಬದುಕಿದವರು. ಅವರಿಗೆ ಖರೇನಾ ಜಾತಿ ಬಿಡಿಸಿದರ ಉಸುರುಗಟ್ಟಿ ಗೊಟಕ್ ಅಂದಾರು. (ದೃಶ್ಯ 03, ಪುಟ 24, 25)
 *****

ಬಸವಣ್ಣ (ಬಿಜ್ಜಳ ಮಹಾರಾಜರಿಗೆ): ನಮ್ಮ ಬಯಕೆಯ ಬೇಗುದಿಗೆ ಶಿವನನ್ನುಒಗ್ಗಿಸೋದು ಬ್ಯಾಡ, ಧಣಿ. ಶಿವನಿಚ್ಛಾನ ನಮ್ಮ ಬಾಳಾಗಬೇಕು. ಅವ ಸೋಲನ್ನೊಡ್ಡಲಿ, ಗೋಳಾಡಿಸಲಿ. ನಮ್ಮ ಕಡಿಗೆ ಲಕ್ಷ್ಯ ಕೊಡತಾನಲ್ಲ. ಅದಾ ನಮ್ಮ ಗೆಲುವು. (ದೃಶ್ಯ 10, ಪುಟ 86, 87)
*****

ಸಂಕ್ರಾಂತಿ- ಪಿ.ಲಂಕೇಶ್

ಬಸವಣ್ಣ (ಬಿಜ್ಜಳನಿಗೆ): ಅರಮನೆಯ ಪಲ್ಲಂಗದ ಮೇಲೆ ಒರಗಿ ಸುಂದರ ಕಂಠಗಳ ಧ್ವನಿ ಕೇಳುವವರಿಗೆ ಬೀದಿಯ ಗೋಳು ತಟ್ಟುವುದು ಕಷ್ಟ. ತಮ್ಮ ಕಿರೀಟದ ಒಂದು ವಜ್ರ ಈ ದೇಶದ ಅರ್ಧ ಹೊಟ್ಟೆಗಳಿಗೆ ಅನ್ನ ಕೊಡಬಲ್ಲದು. ಚನ್ನಕೇಶವನ ಮುತ್ತಿನ ಹಾರ ಅನೇಕರ ಕಂಬನಿ ಒರೆಸಬಲ್ಲದು. ಇದನ್ನು ಹಲವೊಮ್ಮೆ ಹೇಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ. ಈ ರಾಜ್ಯದ ಪ್ರತಿಯೊಂದು ವಿಗ್ರಹವೂ ಬಡಜನರ ಮೂಕವೇದನೆಯ ಘನರೂಪವಾಗಿದೆ. ನಿಮ್ಮ ವೈದಿಕರ ಮಂತ್ರ ಅರಮನೆಯ ಗೋಡೆಗಳಳೊಗೆ ಸುತ್ತಿ ಸತ್ತುಹೋಗಿದೆ. ಇದನ್ನು ಹೇಗೆ ಸಮರ್ಥಿಸುತ್ತೀರಿ? ನಿಮ್ಮ ಎಲ್ಲ ಕನಸು ಈ ಗೋಳಿನ ಮಧ್ಯದಿಂದ ಆರಂಭವಾಗಬೇಕು. (ದೃಶ್ಯ 04, ಪುಟ 45, 46)
*****

ಬಿಜ್ಜಳ (ಬಸವಣ್ಣನಿಗೆ): ಎಲ್ಲರೂ ಶರಣರಾಗಲು, ಇದ್ದಕ್ಕಿಂದ್ದಂತೆ ಭಕ್ತರಾಗಲು ಹೇಗೆ ಸಾಧ್ಯ? ಕುಡಿಯುವ, ಕೊಂದು ತಿನ್ನುವ ಅಭ್ಯಾಸ ನಿಮ್ಮ ಮಾತುಗಳಿಂದ ತೊಳೆದುಹೋಗುತ್ತದೆಂದು ನಂಬುವುದು ಹೇಗೆ ಸಾಧ್ಯ? ಬಸವಣ್ಣ, ನೀವು ಕುರಿ ಕೊಲ್ಲುವುದನ್ನು ತಪ್ಪಿಸಿದರೆ ಜನ ಮನುಷ್ಯರನ್ನು ಕೊಲ್ಲುತ್ತಾರೆ! ನಾವಿವತ್ತು ನಿಮ್ಮ ರುದ್ರನನ್ನು ಬಲಿಕೊಡದಿದ್ದರೆ ಜನ ನನ್ನನ್ನು ಬಲಿ ಕೊಡುತ್ತಾರೆ. ನಿಮ್ಮ ಕಾವಿ ಧರಿಸಿದ ಶರಣ ಜನ ಸಾಲುಸಾಲಾಗಿ ಊಟದ ಮನೆಗೆ ಹೋಗುತ್ತಿರುವುದನ್ನು ನೋಡಿ ನಕ್ಕಿದ್ದೇನೆ ಬಸವಣ್ಣ. ಭಕ್ತರಿಗೆ ಹೊಟ್ಟೆ ಕೂಡಾ ಇದೆ ಎಂಬುದನ್ನು ಕಂಡು ವಿಸ್ಮಯಗೊಂಡಿದ್ದೇನೆ. ಅವರ ಭಜನೆಯ ಗದ್ದಲ ನನಗೆ ತಮಾಷೆ ಅನಿಸಿದೆ. ಊಟ, ಭಜನೆಯ ಅವಸರದಲ್ಲಿ ಪಾಳುಬಿದ್ದ ಗದ್ದೆಗಳನ್ನು ನೀವು ನೋಡಿಲ್ಲ. ಬ್ರಾಹ್ಮಣರ ಮಂತ್ರಗಳಂತೆ ಶರಣರ ವಚನಗಳು ಕೂಡ ಉತ್ತು ಬೆಳೆ ಕೊಡಲಾರವು. (ದೃಶ್ಯ 04, ಪುಟ 51, 52)
*****

ಬಸವಣ್ಣ(ಸಭೆಗೆ): ನಾನು ಎಲ್ಲವನ್ನು ಕೂಲಂಕುಷವಾಗಿ ಯೋಚಿಸಿದ್ದೇನೆ. ನಮ್ಮ ದೊರೆ ಬಿಜ್ಜಳ ಪ್ರಭುಗಳೊಂದಿಗೆ ಚರ್ಚಿಸಿದ್ದೇನೆ. ನೀವು ಶರಣರಾಗಬೇಕೆಂದು ಎಂದೂ ಒತ್ತಾಯಪಡಿಸಿದವನಲ್ಲ ನಾನು; ಅಂದ ಮೇಲೆ ನಿಮ್ಮ ತಪ್ಪುಗಳನ್ನು ಟೀಕಿಸಲು ಹಿಂಜರಿದವನಲ್ಲ. ಮನಸ್ಸು ಚಂಚಲ; ಅದು ಶರಣತ್ವದಿಂದ ಜಾರುವುದು, ಸಂಗಮನಿಂದ ದೂರ ಸರಿಯುವುದು ಸುಲಭ. ಈ ಬಗೆಯ ‘ಸುಲಭ’ಕ್ಕೆ ನಿಮ್ಮಲ್ಲಿ ಹಲವರು ತುತ್ತಾಗಿದ್ದಾರೆ; ನನಗೆ ಕೊಟ್ಟ ಆಶ್ವಾಸನೆಯನ್ನು ಮುರಿದಿದ್ದಾರೆ. ರಾಜ್ಯದಲ್ಲಿ ಶರಣರ ಲಾಂಛನದಲ್ಲಿ ಕೊಲೆ, ಸುಲಿಗೆ, ವ್ಯಭಿಚಾರ ಅತಿಯಾಗಿದೆ; ಎಲ್ಲೆಲ್ಲೂ ಕಗ್ಗತ್ತಲು ಹಬ್ಬುತ್ತಿದೆ. ಇದು ಬಿಜ್ಜಳರನ್ನು ಕಾಡುತ್ತಿರುವ ಸಮಸ್ಯೆ. ನನ್ನಿಂದ ಯಾರಿಗಾದರೂ ಕಿಂಚಿತ್ತು ಅನ್ಯಾಯವಾದರೆ ನಿಮ್ಮ ಅಣ್ಣ ನಾನಲ್ಲ; ನನ್ನ ಆದರ್ಶ ಜೀವಿಗಳು ನೀವಲ್ಲ. ನಾವೆಲ್ಲ ಪರಸ್ಪರರ ಕಣ್ಣು ತಪ್ಪಿಸಿ ತಪ್ಪು ಮಾಡಬಹುದು. ಆದರೆ ನಮ್ಮ ಕಣ್ಣುಗಳಿಂದ ನಮಗೆ ಬಿಡುಗಡೆಯಿಲ್ಲ; ಸಂಗಮನಿಗೆ ಮೋಸ ಮಾಡಲು ಆಗುವುದಿಲ್ಲ. (ದೃಶ್ಯ 05, ಪುಟ 69, 70)
*****

ಈ ಮೇಲಿನ ಸಂಭಾಷಣೆಗಳು ತಲೆದಂಡ ಮತ್ತು ಸಂಕ್ರಾಂತಿ ನಾಟಕಗಳಲ್ಲಿ ನನ್ನನ್ನು ಪ್ರಭಾವಿಸಿದ ಸಂಭಾಷಣೆಗಳಲ್ಲಿ ಕೆಲವು. ಇವು ಅರ್ಥವಾಗದಿದ್ದರೆ ಅಥವಾ ಅಲ್ಪಸ್ವಲ್ಪ ಅರ್ಥವಾದರೆ ಈ ಎರಡು ನಾಟಕಗಳನ್ನು ಓದಬಹುದು. ಖಂಡಿತಾ ಈ ಎರಡು ನಾಟಕಗಳು ಶರಣ ಚಳುವಳಿಯ ಸಾಧಕ-ಬಾಧಕಗಳನ್ನು, ಅಡ್ಡಿ-ಆತಂಕಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿವೆ. ಅಲ್ಲದೇ ನಮಗೆ ಹೊಸ ಒಳನೋಟಗಳನ್ನು ತಿಳಿಸಲಿವೆ.

ಬಸವ ಜಯಂತಿಯ ಶುಭಾಶಯಗಳು.

ಬಾಗಿದ ತಲೆಯ, ಮುಗಿದ ಕೈಯಾಗಿರಿಸು ಕೂಡಲಸಂಗಮದೇವಾ.

ಆಕರ:
ತಲೆದಂಡ (ನಾಟಕ) -ಗಿರೀಶ್ ಕಾರ್ನಾಡ-1990- ಮನೋಹರ ಗ್ರಂಥಮಾಲಾ- ಧಾರವಾಡ
ಸಂಕ್ರಾಂತಿ (ನಾಟಕ)- ಪಿ.ಲಂಕೇಶ್- 1971- ಲಂಕೇಶ್ ಪ್ರಕಾಶನ- ಬೆಂಗಳೂರು

Comments



  1. ಉಲ್ಲೇಖಿಸಿದ ಸಂಭಾಷಣೆಗಳೆಲ್ಲ ಕತ್ತಿ.
    ನಾಟಕಗಳ ಬಗ್ಗೆ ಕುತೂಹಲ ಹುಟ್ಟಿಸುತ್ತವೆ,
    ಓದಿದವರೂ ಮತ್ತೆ ಓದುವಂತೆ ಮಾಡುತ್ತವೆ.

    ಧನ್ಯವಾದ ನಿಮ್ಮ ಈ ಬರಹಕ್ಕೆ :)

    ReplyDelete
  2. ಧನ್ಯವಾದಗಳು sir ನಮ್ಮ ಪೊಲೀಸ್ ಕೆಲಸದ ಮಧ್ಯ ಬಿಡುವು ಮಾಡಿಕೊಂಡು ಓದುತ್ತೆವೆ. ಕೆಲವೊಂದು ವಿಚಾರಗಳು ನಮ್ಮಗೆ ತಿಳಿಯದೆ ಇರಿತ್ತವೆ ಅಂತಹ ವಿಚಾರಗಳು ಸತ್ಯ ಮತ್ತು ನಿತ್ಯ ವಾಗಿರುತ್ತವೆ , ಅಂತಹ ವಿಷಯಗಳನ್ನು ನಿಮ್ಮಿಂದ ಮತ್ತು ಗೆಳೆಯ ಹರೀಶ್ ನಿಂದ ತಿಳಿದುಕೊಂಡಿದ್ದೆನೆ. ಧನ್ಯವಾದ ಗಳೊಂದಿಗೆ ಇಂತಿ ನಿಮ್ಮ ವಿಧ್ಯಾರ್ಥಿ ಲಿಂಗರಾಜ ಮಾಗಳ

    ReplyDelete

Post a Comment