ನಾಟಕ- ಪಿ.ಲಂಕೇಶರ ತೆರೆಗಳು

"ತಲತಲಾಂತರದಿಂದ ತಪ್ಪಿಸಿಕೊಂಡು ಓಡಾಡ್ತಾನೇ ಇದ್ದೀವಿ ಸ್ವಾಮಿ
ಕಾಡಿಗೆ, ಶಾಸ್ತ್ರಕ್ಕೆ, ಸಂಕೇತಕ್ಕೆ.
ಒಂದು ಸಲವಾದ್ರೂ ನಿಂತು ಎದುರಿಸೋದು ಬೇಡವೆ??"

ಇದೇ ಅಕ್ಟೋಬರ್‍ 21ರಂದು ಹೂವಿನಹಡಗಲಿಯ ರಂಗಭಾರತಿ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಪಿ.ಲಂಕೇಶರ 'ತೆರೆಗಳು' ನಾಟಕದ ಕಂಠಿ ಪಾತ್ರ ಹೇಳುವ ಮಾತಿದು. ವಿದ್ಯಾರ್ಥಿ ಗೆಳೆಯ ಅಜಯ್ ಚಲವಾದಿ ತನ್ನ ರಂಗಶಂಕರದ ಮೇಕಿಂಗ್ ಥಿಯೇಟರ್‍ ಕಾರ್ಯಾಗಾರದ ಭಾಗವಾಗಿ ನಿರ್ದೇಶಿಸಿದ್ದ ಈ ನಾಟಕ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತಲೇ ಉತ್ತರ ನಾವೇ ಕಂಡುಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾಯಿತು.

ಮನವರಿಯದ ಕಳ್ಳತನವಿಲ್ಲವಲ್ಲ ಅನ್ನುತ್ತಾರೆ ಸರ್ಪಭೂಷಣ ಶಿವಯೋಗಿಗಳು. ನಾವು ಎಷ್ಟೇ ಪರಿಶುದ್ಧರು, ಮುಗ್ಧರು, ಅಮಾಯಕರು ಅಂತ ಜಗತ್ತಿಗೆ ತೋರಿಸಿಕೊಂಡರೂ ಒಳಗಿನ ದನಿಯೊಂದು ನಮ್ಮ ನಿಜ ವ್ಯಕ್ತಿತ್ವವನ್ನು ಸದಾ ಅಣಕಿಸುತ್ತಿರುತ್ತದೆ. ನಾವು ಇಡೀ ಜಗತ್ತನ್ನೇ ವಂಚಿಸಬಹುದು ಆದರೆ ನಮ್ಮನ್ನು ನಾವು ವಂಚಿಸಿಕೊಳ್ಳುವುದು ಅಸಾಧ್ಯದ ಮಾತು.

ಹೀಗೆ ಏನೇನೋ ಪ್ರತಿಕ್ರಿಯೆಗಳು ತೆರೆಗಳು ನಾಟಕ ನೋಡಿದ ಮೇಲೆ ನಮಗೆ ಸಿಗಬಹುದು. ವ್ಯಕ್ತಿ, ಕಂಠಿ, ವಿಟ್ಟಿ ಮತ್ತು ಕಿಟ್ಟಿ ಈ ನಾಟಕದ ಪಾತ್ರಭೂಮಿಕೆಯಲ್ಲಿರುವವರು. ನಾಲ್ಕು ಪಾತ್ರಗಳಿದ್ದರೂ ಇಡೀ ನಾಟಕದುದ್ದಕ್ಕೂ ವ್ಯಕ್ತಿಯ ಪಾತ್ರದ ಕೇಂದ್ರಿತವಾಗಿಯೇ ಇಡೀ ನಾಟಕ ಸಾಗುತ್ತದೆ.

ಮೊದಮೊದಲು ವ್ಯಕ್ತಿಯ ಮನೆಗೆ ಯಜಮಾನನನ್ನು ಹುಡುಕಿಕೊಂಡು ಬಂದ ಮೂವರು ವ್ಯಕ್ತಿಯನ್ನು ಮಾತನಾಡಿಸುವ ರೀತಿಯಲ್ಲಿ ಅವರು ಆತನ ವಿದ್ಯಾರ್ಥಿಗಳು ಎನಿಸುತ್ತದೆ, ನಂತರ ಆದಾಯ ತೆರಿಗೆ ಇಲಾಖೆಯವರಾಗಿ, ಪೊಲೀಸರಾಗಿ, ಗೂಢಾಚಾರರಾಗಿ ಭಾಸವಾಗುತ್ತದೆ.
ವ್ಯಕ್ತಿ ತನ್ನ ಮನೆಯಲ್ಲೇ ಪರಕೀಯನಾಗುತ್ತಾನೆ, ಮನೆಗೆ ಬಂದ ಅತಿಥಿಗಳ ಪರವಾನಗಿ ಪಡೆದು ಮನೆಯಿಂದ ಹೊರಹೋಗುವ ಮಟ್ಟಕ್ಕೆ ಹೊರಗಿನವನಾಗುತ್ತಾನೆ. ಕೊನೆಕೊನೆಗೆ ಮನೆಯೇ ಕೋರ್ಟ್ ಹಾಲ್ ಆಗಿ ಮಾರ್ಪಟ್ಟು ಆ ಮೂವರು ಅತಿಥಿಗಳೆ ವಿಚಾರಣೆ ಮಾಡಿ ವ್ಯಕ್ತಿಯನ್ನು ನೇಣುಗಂಬಕ್ಕೇರಿಸುವವರೆಗೆ ನಾಟಕ ಹಲವು ಗೊಂದಲಗಳನ್ನು ಸೃಷ್ಟಿಸುತ್ತದೆ. ಹೆರಾಲ್ಡ್ ಪಿಂಟರನ 'ದಿ ಬರ್ತಡೇ ಪಾರ್ಟಿ' ಮತ್ತು  ಫ್ರಾನ್ಜ್ ಕಾಫ್ಕಾನ 'ದಿ ಟ್ರಯಲ್' ನಾಟಕಗಳ ಪ್ರಭಾವ ಈ ನಾಟಕದ ಮೇಲಿರುವುದು ದಟ್ಟವಾಗಿ ಗೋಚರಿಸುತ್ತದೆ.

ವ್ಯಕ್ತಿ ತಾನು ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪುಗಳೇ ಮನುಷ್ಯರೂಪ ತಾಳಿ ಅವನನ್ನು ವಿಚಾರಿಸಲು ಬಂದಾಗ ತಾನು ಮಾಡಿರುವ ತಪ್ಪಿನ ಅರಿವಿರುವ ವ್ಯಕ್ತಿ ಸಮಜಾಯಷಿ ಕೊಡಲು ಹೆಣಗಾಡುವುದು ಮತ್ತು ಅವನ ಸಮಜಾಯಷಿಗಳೆಲ್ಲ ಸುಳ್ಳು ಎಂದು ಗೊತ್ತಿದ್ದರೂ ಉಳಿದ ಮೂವರು ಮೌನವಾಗಿ, ವ್ಯಂಗ್ಯವಾಗಿ ಕೇಳಿಸಿಕೊಳ್ಳುವುದು ಇಡೀ ನಾಟಕದುದ್ದಕ್ಕೂ ಸಾಗುತ್ತದೆ.
ಈ ಹಂತದಲ್ಲಿ ನಾಟಕದ ಎರಡು ಡಯಲಾಗ್‌ಗಳು ಮನಸೆಳೆಯುತ್ತವೆ.

ವ್ಯಕ್ತಿ:  ಮತ್ತೆ ತಪ್ಪು ಮಾಡೋದಿಲ್ಲ ಅಂತ ಬೇಕಿದ್ರೆ ಪ್ರಮಾಣ ಮಾಡಿ ಹೇಳ್ತೇನೆ

ಕಿಟ್ಟಿ: ಹುಟ್ಟು ಒಂದ್ ಸಲ
ಸಾವು ಒಂದ್ ಸಲ
ತಪ್ಪು ಒಂದ್ ಸಲ ಶಿಕ್ಷೆ ಒಂದ್ ಸಲ!
***
ವ್ಯಕ್ತಿ: ನಾನು ಮಾತನಾಡುವುದು ಬೇಡವೆ?

ಕಂಠಿ: ಸಾಕಷ್ಟು ಆಡಿದ್ದೀರಿ, ತಲೆದೂಗುವಂತೆ ಸದ್ದು ಮಾಡಿದ್ದೀರಿ, ಮೈ ಮರೆಯುವಂತೆ ಇಂಪಾಗಿ ಹಾಡಿದ್ದೀರಿ. ಈಗ ಹೇಳಿ ತಮ್ಮ ಕೊನೆ ಆಸೆ ಏನು?
***

ಶಿಕ್ಷೆಯನ್ನು ನಿಶ್ಚಯ ಮಾಡಿಕೊಂಡೇ ಅಪರಾಧಿಯನ್ನು ಕಟಕಟೆಗೆ ತಂದು, ಅವನು ಹೇಳುವುದನ್ನೆಲ್ಲ ಕೇಳಿಸಿಕೊಂಡು ಕೊನೆಗೆ ತಾವು ಅಂದುಕೊಂಡ ಶಿಕ್ಷೆಯನ್ನು ವಿಧಿಸುವುದು ಈ ನಾಟಕದ ವ್ಯಂಗ್ಯಗಳಲ್ಲಿ ಒಂದು.

ಕೊನೆವರೆಗೂ ಹೊರಗಿನವರು ಯಾರು ಒಳಗಿನವರು ಯಾರು ಎಂಬ ಗೊಂದಲವನ್ನು ಉಳಿಸಿಕೊಂಡು ಹೋಗುವ ನಾಟಕ, ಅವನ್ನೆಲ್ಲವನ್ನು ತೀರ್ಮಾನಿಸುವ ಹೊಣೆಯನ್ನು ನಮ್ಮ ಮೇಲೆಯೇ ಬಿಡುತ್ತದೆ. ಒಟ್ಟಿನಲ್ಲಿ ಆ ಮೂವರು ಹೊರಗಿನ ಪಾತ್ರಗಳೇ ಆಗಿರಲಿ, ಆ ವ್ಯಕ್ತಿಯ ತಪ್ಪುಗಳ ಮನುಷ್ಯರೂಪವೇ ಇರಲಿ. ತಪ್ಪು ಮಾಡಿರುವ ವ್ಯಕ್ತಿಗೆ ತನ್ನ ಮನಸು ಕೊಡುವ ಅಪರಾಧಿ ಭಾವದ ಶಿಕ್ಷೆ ಮಾತ್ರ ಅತ್ಯಂತ ಕಠೋರ. ಅದರಿಂದ ತಪ್ಪಿಸಿಕೊಳ್ಳುವುದು ಮಾತ್ರ ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಾಗಿಲ್ಲ.

ಇನ್ನು ನಾಟಕದ ವಿನ್ಯಾಸದ ಬಗ್ಗೆ ಹೇಳುವುದಾದರೆ ನಿರ್ದೇಶಕ ಅಜಯ್ ಚಲವಾದಿ ತಮ್ಮ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಅಗತ್ಯಕ್ಕೆ ತಕ್ಕ ಹಾಗೆ ನಾಟಕದಲ್ಲಿ ಬಳಸಿರುವ ಕವನಗಳು ಅದ್ಭುತ ಪ್ರಯೋಗ. ಜೊತೆಗೆ ನಿರ್ದೇಶಕರು ನಾಟಕದ ಕ್ಲೈಮಾಕ್ಸನ್ನು ಹೊಸ ರೀತಿ ವಿನ್ಯಾಸಗೊಳಿಸಿ ನಾಟಕವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸಿದ್ದಾರೆ. ನಾಲ್ಕೂ ಪಾತ್ರಗಳೂ ತಮ್ಮ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅಸಂಗತ ನಾಟಕವೊಂದು ಎಲ್ಲ ವರ್ಗದ ಪ್ರೇಕ್ಷಕರಿಗೂ ತಲುಪುವಂತೆ ಮಾಡಿದ ಕೀರ್ತಿ ಇಡೀ ನಾಟಕ ತಂಡಕ್ಕೆ ಸಲ್ಲಬೇಕು.

Comments

  1. ಎಂದಿನಂತೆ ಒಳ್ಳೆಯ ವಿಮರ್ಶೆ 😊

    ReplyDelete
  2. ಉತ್ತಮ ವಿಮರ್ಶೆ.... ನಾನೂ ನಾಟಕ ನೋಡಲು ಬರಬೇಕಿತ್ತು ಅಜಯ್.. ಮತ್ಯಾವಾಗಾದ್ರು ಬರುವೆ..

    ReplyDelete
  3. ಉತ್ತಮ ವಿಮರ್ಶೆ.... ನಾನೂ ನಾಟಕ ನೋಡಲು ಬರಬೇಕಿತ್ತು ಅಜಯ್.. ಮತ್ಯಾವಾಗಾದ್ರು ಬರುವೆ..

    ReplyDelete

Post a Comment