ಪ್ರತಿ ಸೋಮವಾರ ಹಲವರ WhatsApp ಸ್ಟೇಟಸ್ ನಲ್ಲಿ ಕಾಣುವ ಹಾಡು ಹಾಲುಂಡ ತವರು ಸಿನೆಮಾದ ಏಳು ಶಿವ ಏಳು ಶಿವ ಬಾಳ ಬಂಡಿ ಹೂಡು ಶಿವ.. ಹಂಸಲೇಖ ಬರೆದಿರುವ ಈ ಹಾಡು ಎಲ್ಲ ಶಿವ ಭಕ್ತರಿಗೂ ಅಚ್ಚುಮೆಚ್ಚಿನ ಹಾಡು. ಹಲವರು ತಮ್ಮ ಭಕ್ತಿಯನ್ನು ಹೊರ ಹಾಕಲು ಆಯ್ದು ಕೊಂಡಿರುವ ಮಾರ್ಗವೂ ಆಗಿದೆ ಈ ಹಾಡು. ಹಂಸಲೇಖರ ಸಂಗೀತ ಮತ್ತು ಕೆ ಎಸ್ ಚಿತ್ರ ಅವರ ದನಿ ಈ ಹಾಡನ್ನು ಇನ್ನಷ್ಟು ದೈವೀಕಗೊಳಿಸಿವೆ. ಶಿವನನ್ನು ಎಬ್ಬಿಸುವ ಸುಪ್ರಭಾತದ ಹಾಡು ಇದು ಎಂದೇ ಹಲವರು ಆರಾಧಿಸುತ್ತಾರೆ.
ಆದರೆ ಈ ಹಾಡನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಂಸಲೇಖ ಈ ಹಾಡಿನಲ್ಲಿ ನಿಜಕ್ಕೂ ದೇವರನ್ನೇ ಎಬ್ಬಿಸುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ. ಈ ಅನುಮಾನಕ್ಕೆ ಮೂಲವೇ ಆ ಹಾಡಿನ ಎರಡನೇ ಸಾಲು - 'ಬಾಳ ಬಂಡಿ ಹೂಡು ಶಿವ'
ಯೋಚನೆ ಮಾಡಿ, ಶಿವ ತನ್ನ ಬಾಳ ಬಂಡಿ ಹೂಡಬೇಕೆ ಅಥವಾ ನಮ್ಮ ಬಾಳ ಬಂಡಿ ಹೂಡು ಎಂಬ ಪ್ರಾರ್ಥನೆಯೇ? ನನ್ನ ಪ್ರಕಾರ ಎರಡೂ ಅಲ್ಲ! ಈ ಹಾಡಿನಲ್ಲಿ ಬರುವ ಶಿವ ನಾವೇ ಯಾಕಾಗಿರಬಾರದು? ಈ ಪ್ರಶ್ನೆಯನ್ನು ಮನಸಿನಲ್ಲಿಟ್ಟುಕೊಂಡು ಮತ್ತೊಮ್ಮೆ ಆ ಹಾಡು ಕೇಳಿದಾಗ, ಹಂಸಲೇಖರ ಅದ್ಬುತ ಫಿಲಾಸಫಿ ಅರ್ಥವಾಗುತ್ತ ಹೋಗುತ್ತದೆ.
ಚರಣದಲ್ಲಿ ಬರುವ ಸಾಲುಗಳು ನನ್ನ ವಾದವನ್ನು ಸಮರ್ಥಿಸುತ್ತವೆ.
"ಭೂಮಿ ನಮ್ಮ ಆಲಯ
ಕಾಯಕವೇ ದೇವರು
ದೇವರಿಗೆ ಸೂರ್ಯನದೇ ಆರತಿ"
ಶರಣ ಬಸವಣ್ಣ ದೇಹವೇ ದೇಗುಲವೆಂದ ರೀತಿಯಲ್ಲೇ ಈ ಸಾಲುಗಳು ಅರ್ಥ ಹೊರಡಿಸುತ್ತಿವೆ. ಹಂಸಲೇಖರ ಪ್ರಕಾರ ಇಡೀ ಭೂಮಿಯೇ ನಮ್ಮ ದೇವಾಲಯ. ನಾವಿಲ್ಲಿ ಸ್ಥಾವರಕ್ಕಲಳಿವುಂಟು ಎಂಬ ಬಸವಣ್ಣ ಮಾತು, ಹಲವು ಕಾವ್ಯಗಳ ಸಾಲುಗಳನ್ನು ನೆನಪಿಸಿಕೊಳ್ಳಬಹುದು. ಕುವೆಂಪು ಅವರ ಜಾಲಗಾರದಲ್ಲಿ ಬರುವ ಜಗದ ತೋಟಿಯನ್ನು ನೆನಪಿಸಿಕೊಳ್ಳಬಹುದು. ಹಲವು ದಾರ್ಶನಿಕರು ಹೇಳಿದ ತತ್ವಗಳನ್ನು ಹಂಸಲೇಖರು ಮೂರು ಸಾಲಿನಲ್ಲಿ ಹೇಳಿದ್ದಾರೆ.
ಹಂಸಲೇಖರ ಸಾಹಿತ್ಯ ಮೂಲತಃ ಜಾನಪದದ ಬೇರಿನಿಂದ ಅರಳಿದ ಬಳ್ಳಿ. ಹಾಗಾಗಿ ನೆಲಮೂಲದ ಹಲವು ತತ್ವಗಳನ್ನು ಅವರು ತಮ್ಮ ಹಲವಾರು ಹಾಡಿನಲ್ಲಿ ಪ್ರತಿಫಲಿಸಿದ್ದಾರೆ. ಅದೇ ರೀತಿ ಈ ಹಾಡಿನಲ್ಲೂ ಕೂಡ ಅದು ಕಾಣುತ್ತದೆ. ಇಲ್ಲಿ ಭೂಮಿಯೇ ನಮ್ಮ ದೇವಾಲಯ ಎನ್ನುತ್ತಾರೆ ಹಂಸಲೇಖ. ಶರಣರು ಕಾಯಕವೇ ಕೈಲಾಸ ಎಂದರು, ಹಂಸಲೇಖ ಇನ್ನೂ ಮುಂದುವರಿದು ಕಾಯಕವನ್ನು ದೇವರಿಗೆ ಹೋಲಿಸಿದ್ದಾರೆ. ನಮ್ಮ ಎಲ್ಲ ಕೆಲಸಗಳು ಆರಂಭವಾಗುವ ಸೋಮವಾರ ಈ ಹಾಡನ್ನು ಕೇಳುವುದು ಇನ್ನಷ್ಟು ಅರ್ಥಪೂರ್ಣವೂ ಆಗಿದೆ. ವಾರದ ಕಾಯಕ ಆರಂಭವಾಗುವ ದಿನ ಈ ಹಾಡು ಕೇಳಿ ಶಿವನನ್ನು ಹೊಗಳುವ ಬದಲು, ನಮ್ಮೊಳಗಿನ ಶಿವನನ್ನು, ಕಾಯಕದ ದೇವರನ್ನು 'ಸೂರ್ಯನ ಆರತಿ'ಯೊಂದಿಗೆ ಎಚ್ಚರಿಸಿ ಕಾರ್ಯ ಪ್ರವೃತ್ತರಾಗಬೇಕೆಂಬ ಸ್ವಯಂ ಪ್ರೇರಣೆ ನೀಡುವ ಹಾಡು ಇದು. ಇದು ಸೋಮವಾರದ ಹಾಡೇ ಆಗಬೇಕಿಲ್ಲ, ಹಾಗೆ ನೋಡಿದರೆ ನೆಲಮೂಲದ ರೈತಾಕಿ ಕೆಲಸಗಳಿಗೆ ಸೋಮವಾರವೇ ರಜೆ. ಒಟ್ಟಾರೆ ನಮ್ಮ ಕಾಯಕ ಆರಂಭಿಸುವಾಗ ನಮ್ಮ ಒಳಗಿನ ಶಿವನಿಗೆ ಹಾಡಿಕೊಳ್ಳುವ ಸುಪ್ರಭಾತ ಇದು.
"ಕಾಮ ಕ್ರೋಧ ಎಸೆದು ಮೇಲೆ ಏಳು ಶಿವ.. "
ಮುಂದಿನ ಸಾಲುಗಳಲ್ಲಿರುವ ಫಿಲಾಸಫಿಯನ್ನು ಗಮನಿಸಿ.
"ಬಾಳ ಬಂಡಿ ಎಳೆಯಲು
ಪ್ರೇಮವೆಂಬ ಭೂಮಿಗೆ
ಪಾಪಗಳ, ವ್ಯಾಘ್ರಗಳ ಹೂಡದೆ
ಮನದ ಹೊಲ ಉಳುವ ಛಲ
ಕಣ್ಣ ತುಂಬಾ ತುಂಬಿಕೊಂಡು
ಏಳು ಶಿವ..."
ಪ್ರತಿ ಬೆಳಗ್ಗೆ ಏಳುವಾಗ ನಮಗೆ ನಾವು ಹಾಡಿಕೊಳ್ಳಬೇಕಾದ ಸುಪ್ರಭಾತ ಇದು ಎಂದು ಅದಕ್ಕೆ ನಾನು ಹೇಳಿದ್ದು. ನಮ್ಮ ಮನದ ಹೊಲ ಇರುವ ಪ್ರೇಮವೆಂಬ ಭೂಮಿಯನ್ನು ಉಳುವ ಛಲ ಇರುವ ನಮಗೆ, ಆ ಹೊಲವನ್ನು ಪಾಪ ಮತ್ತು ವ್ಯಾಘ್ರಗಳನ್ನು ಹೂಡಿ ಉಳಬಾರದು ಎನ್ನುತ್ತಾರೆ ಹಂಸಲೇಖ.
ಈ ಹಾಡಿನಲ್ಲಿ ಶಿವ ಒಂದು ರೂಪಕ ಮಾತ್ರ. ಅದು ಗುಡಿಯ ಶಿವನೇ ಎಂದುಕೊಂಡರೆ ಈ ಹಾಡಿನ ಮೂಲಕ ಹಂಸಲೇಖರು ಸರಳವಾಗಿ ಕೊಡುತ್ತಿರುವ ಬದುಕಿನ ಫಿಲಾಸಪಿ ನಮಗೆ ದಕ್ಕುವುದಿಲ್ಲ. ಇನ್ನು ಮುಂದೆ ಈ ಹಾಡು ಕೇಳುವಾಗ ಇದು ಗುಡಿಯೊಳಗೆ ಇರಬಹುದಾದ ಶಿವನ ಹಾಡಲ್ಲ, ನಮ್ಮೊಳಗೆ ಇರಬಹುದಾದ ಶಿವನ ಹಾಡು ಎಂದು ಕೇಳಿಸಿಕೊಂಡರೆ ಬದುಕು ತುಂಬಾ ಸರಳ ಎನಿಸುತ್ತದೆ. ಹಗುರವೆನಿಸುತ್ತದೆ. ಹಾಡನ್ನು ಈಗ ಮತ್ತೊಮ್ಮೆ ಕೇಳಿ ನೋಡಿ.
Very nice and informative sir.
ReplyDelete🙏 super sir
ReplyDeleteನೆಚ್ಚಿನ ಭಕ್ತಿಗೀತೆಗಳಲ್ಲೊಂದಾದ ಈ ಹಾಡಿನ ಬಗ್ಗೆ ಸ್ವಲ್ಪ ತಿಳಿದಿದ್ದೆ ಇನ್ನೂ ಹೆಚ್ಚಿನ ಫಿಲಾಸಫಿ ತಮ್ಮಿಂದ ತಿಳಿದೆ. ಹಾಡಿನ ಫಿಲಾಸಫಿ ತಿಳಿಸಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು. 🙏
ReplyDeleteNicely explained..
ReplyDelete👌Sir
ReplyDelete