ರೈತನ ಮಡದಿ | Translated Poem


ರೈತನ ಮಡದಿ

ತೆಲುಗು ಮೂಲ: ವೋಲ್ಗಾ (ಚಾವುನಿ ಕಾದು ಬತುಕುನಿ)

ಇಂಗ್ಲಿಷಿಗೆ: ವಸಂತ ಕನ್ನವೀರನ್ (The Farmer’s Wife)

 

ನೀನೇನೋ ಪುಣ್ಯವಂತ, ಹೋಗಿಬಿಟ್ಟೆ.

ಪಾಪಿ ನಾನು ಇನ್ನೂ ಬದುಕಿರುವೆ

ನಿನ್ನ ಸಾಲದಾತರ ಮುಂದೆ.

 

ಇನ್ನೊಬ್ಬರ ಮುಂದೆ ತಲೆ ಬಾಗಲಾರದೆ,

ಕೈ ಚಾಚಲಾರದೇ, ಬೆಳೆದ ಬೆಳೆಯ

ಮಾರಲೂ ಆಗದೆ, ನೀ ಹೋಗಿಬಿಟ್ಟೆ.

 

ಆದರೆ ನಾನು? ತಲೆ ತಗ್ಗಿಸಿಯೇ ಹುಟ್ಟಿದವಳು,

ಕೈ ಚಾಚುತ್ತಲೇ ಬೆಳೆದವಳು,

ಮಾರಾಟದ ವಸ್ತುವಾಗಿಯೇ ಬದುಕಿದವಳು,

ಇದೆಲ್ಲವನು ತಿಳಿದೂ ನನ್ನ ಬಿಟ್ಟು ಹೋದೆಯಾ?

 

ವಿಷದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡವ ನೀನು

ನನ್ನ ಅಸ್ತಿತ್ವಕ್ಕೇ ವಿಷವಿಟ್ಟು ಹೋದವನು.

ಬೆಳೆದ ಹತ್ತಿಯೇನೋ ಹಾಳಾಯಿತು,

ಆದರೆ ನಮ್ಮ ಸಂಸಾರ?

 

ಈ ಥರದ ಸಂಕಟದಲ್ಲಿ ನಾನೆಷ್ಟು ಬಾರಿ ಮುಳುಗಿರುವೆ,

ನಾನದೆಷ್ಟು ಬಾರಿ ಸಾವಿನ ಯೋಚನೆಯಿಂದ ಪಾರಾಗಿರುವೆ,

ನೀ ನನ್ನನ್ನು ಅವಮಾನಿಸಿದಾಗ,

ಹಿಂಸಿಸಿದಾಗ, ಕುಡಿದು ಬಂದು ಒದ್ದಾಗ

ನೀನೂ ಮನುಷ್ಯನೇ ಎಂದು ನಾನು

ಅದೆಷ್ಟು ಬಾರಿ ಸಹಿಸಿಕೊಂಡಿಲ್ಲ?

ನಾನು ಕನಸಿನಲ್ಲೂ ಎಣಿಸಿರಲಿಲ್ಲ

ನೀನು ನನ್ನನ್ನು ಹೀಗೆ ಸಾವಿನಿಂದ ಹಿಂಸಿಸುವೆಯೆಂದು.

 

ನಿಜ, ನಮ್ಮ ಫಸಲು ಹಾಳಾಯಿತು,

ಸಾಲ ಹಾಗೇ ಉಳಿಯಿತು,

ಮರ್ಯಾದೆ ಮಣ್ಣು ಪಾಲಾಯಿತು,

ಹೃದಯ ಒಡೆದು ನೀರಾಯಿತು.

 

ಆದರೆ, ನಿನಗೆ ಹೇಗಾದರೂ ಅನ್ನಿಸಿತು

ನನ್ನ ಬೆನ್ನು ಈ ನಾಲ್ಕು ಮಕ್ಕಳ ಭಾರ ಹೊರುವುದೆಂದು?

ನಿನಗೆ ಹಾಳಾದ ನಿನ್ನ ಹೊಲದ ಬೆಳೆ ಮಾತ್ರ ಕಂಡಿತು

ಆದರೆ ನನ್ನ ಗರ್ಭದಲ್ಲಿ ಬೆಳೆದ ಬೆಳೆ ಏಕೆ ಕಾಣಲಿಲ್ಲ?

ನಾನೂ ಅವರನ್ನು, ಕೀಟ ತಿಂದ ಹತ್ತಿಯಂತೆ

ಗಾಳಿಗೆ ತೂರಿ ಬಿಡಲೆ?

 

ಸಾಯುವುದಕ್ಕೆ ಅರೆಕ್ಷಣ ಸಾಕು,

ಆದರೆ ಇದೆಲ್ಲ ಏನಾಯಿತು, ಏಕಾಯಿತು

ಎಂದು ಪ್ರಶ್ನಿಸಿಕೊಳ್ಳಲು ಧೃಢ ಹೃದಯ ಬೇಕು.

ನನ್ನ ಮಕ್ಕಳಿಗೆ-

ಕೇವಲ ಹಿಡಿ ಅಕ್ಕಿಗಾಗಿ ಅಲ್ಲ-

ಬಾಳಿನ ಯುದ್ಧದಲ್ಲಿ ಮುಷ್ಠಿ ಬಿಗಿಹಿಡಿಯುವುದ

ಕಲಿಸಲು ನಾನು ಬದುಕಬೇಕು!

ನಾನು ಅಪ್ಪಿಕೊಳ್ಳಬೇಕು ಬದುಕನ್ನು, ಸಾವನ್ನಲ್ಲ.

ಅಪ್ಪಿಕೊಳ್ಳಬೇಕು ಬದುಕನ್ನು ಮತ್ತು ಬದುಕಿನ ಹೋರಾಟಗಳನ್ನೂ!

~ಪರಶುರಾಮ ನಾಗೋಜಿ 

Comments

Post a Comment