ಪ್ರಯತ್ನಿಸುವವರಿಗೆ ಎಂದೂ ಸೋಲಾಗುವುದಿಲ್ಲ



ಲೆಗಳಿಗೆ ಹೆದರಿದರೆ ದೋಣಿ ಗುರಿ ಸೇರುವುದಿಲ್ಲ
ಪ್ರಯತ್ನಿಸುವವರಿಗೆ ಎಂದೂ ಸೋಲಾಗುವುದಿಲ್ಲ.

ಸಣ್ಣ ಇರುವೆಯೊಂದು ಧಾನ್ಯ ಒಯ್ಯುತ್ತಾ
ಗೋಡೆಗಳನ್ನೇರುವಾಗ ಜಾರುತ್ತದೆ ನೂರು ಬಾರಿ.
ಅದರ ಆತ್ಮವಿಶ್ವಾಸವೇ ಧಮನಿಗಳಲ್ಲಿ ಧೈರ್ಯ ತುಂಬುತ್ತದೆ,
ಏರುವಾಗ ಜಾರುವುದು, ಜಾರುತ್ತಾ ಏರುವುದು ನಿಲ್ಲುವುದಿಲ್ಲ,
ಪ್ರಯತ್ನಿಸುವವರಿಗೆ ಎಂದೂ ಸೋಲಾಗುವುದಿಲ್ಲ.

ಮುತ್ತಿಗೆಂದು ಕಡಲಾಳಕ್ಕೆ ಧುಮುಕುವವನು
ಬರಿಗೈಯಲ್ಲಿ ಮೇಲೆ ಬರುವ ಹಲವು ಬಾರಿ.
ಕಡಲಾಳದಲ್ಲಿ ಮುತ್ತು ಹುಡುಕುವುದಷ್ಟು ಸುಲಭವಲ್ಲ,
ಸುಲಭವಲ್ಲವೆಂಬುದರಲ್ಲೇ ಉತ್ಸಾಹ ದುಪ್ಪಟ್ಟಾಗುತ್ತದೆ.
ಧುಮಿಕಿದ ಪ್ರತಿಬಾರಿಯೂ ಬರಿಗೈಯಲ್ಲೇ ಬರುವುದಿಲ್ಲ,
ಪ್ರಯತ್ನಿಸುವವರಿಗೆ ಎಂದೂ ಸೋಲಾಗುವುದಿಲ್ಲ.

ವೈಫಲ್ಯ ಒಂದು ಸವಾಲು, ಸ್ವೀಕರಿಸೋಣ.
ಮಾಡಲಿನ್ನೇನುಳಿದಿದೆ ನೋಡೋಣ, ಸುಧಾರಿಸಿಕೊಳ್ಳೋಣ.
ಯಶಸ್ವಿಯಾಗುವವರೆಗೂ ನಿದ್ದೆ, ಸುಖವನ್ನು ತ್ಯಜಿಸೋಣ,
ಹೋರಾಟದ ಮೈದಾನವನ್ನೆಂದೂ ತ್ಯಜಿಸದಿರೋಣ.
ಹೊಸದೇನನ್ನೂ ಮಾಡದೇ ಜೈಜೈಕಾರಗಳು ಮೊಳಗುವುದಿಲ್ಲ
ಪ್ರಯತ್ನಿಸುವವರಿಗೆ ಎಂದೂ ಸೋಲಾಗುವುದಿಲ್ಲ.

ಮೂಲ: ಹರಿವಂಶರಾಯ್ ಬಚ್ಚನ್
(ಕೋಶಿಶ್ ಕರ್ನೇ ವಾಲೋಂಕೊ)
ಅನುವಾದ: ಪರಶುರಾಮ ನಾಗೋಜಿ


Comments

Post a Comment