"ಸೇತುವೆ ಬೇಕು ಅಂತ ಬಡಿದಾಡಿದ್ದು ನಾವು
ಈಗ ಸೇತುವೆ ದಾಟಿ ಬರೋ ಲೋಕ ಬೇಡ ಅಂದ್ರೆ ಆಗ್ತದೆ ಏನು?"
ಇತ್ತೀಚೆಗಷ್ಟೆ ರಾಜ್ಯಾದ್ಯಂತ 52 ಪ್ರದರ್ಶನಗಳನ್ನು ಕಂಡು ಮುಕ್ತಾಯಗೊಂಡ ನೀನಾಸಮ್ ತಿರುಗಾಟದ ನಾಟಕ ಸೇತುಬಂಧನದ ಸಂಭಾಷಣೆ ಇದು.
ರಂಗದಿಗ್ಗಜ ಕೆ.ವಿ.ಅಕ್ಷರ ಅವರು ಬರೆದು ನಿರ್ದೇಶಿಸಿರುವ ನಾಟಕ ಸೇತುಬಂಧನ. ಹೊಳೆ ದಂಡೆಯಲ್ಲಿರುವ ಊರೊಂದರ ಕತೆ.
ಊರಿಗೆ ಸೇತುವೆಯೊಂದು ಬೇಕಿದೆ ಎಂದು ದೇವರಿಂದ ಹಿಡಿದು ಸರ್ಕಾರದ ಎಲ್ಲ ಹಂತಗಳಲ್ಲಿ ಪ್ರಯತ್ನಸಿ ಸೇತುವೆ ಮಂಜೂರು ಮಾಡಿಸಿಕೊಂಡ ಜನ ಸೇತುವೆಯೊಟ್ಟಿಗೆ ಬರುವ ಬದಲಾವಣೆಯ ಗಾಳಿಗೂ ತಮ್ಮನ್ನು ತಾವು ತೆರೆದುಕೊಳ್ಳುವ ಮತ್ತು ಹಾಗೆ ಮಾಡುವ ಪ್ರಕ್ರಿಯೆಯನ್ನು ಅತ್ಯಂತ ಸಹಜ ಅಂದುಕೊಳ್ಳುವ ಜನರ ಕತೆ ಸೇತುಬಂಧನ.
ಪ್ರತಿಯೊಂದು ಬದಲಾವಣೆಯ ಪ್ರಕ್ರಿಯೆಯೂ ಅದರೊಳಗೆ ತನ್ನದೇ ಆದ ನೋವನ್ನಿಟ್ಟುಕೊಂಡು ಬರುತ್ತದೆ. ಹಾಗೇ ಹೊಳೆಯೂರಿನ ಸೇತುವೆ ತರಬಹುದಾದ ಹಾಗೂ ಈಗಾಗಲೇ ತಂದಿರುವ ಬದಲಾವಣೆಯೊಟ್ಟಿಗಿನ ನೋವಿಗೆ ಒಗ್ಗಿಕೊಳ್ಳದ 'ಆ್ಯಂಗ್ರಿ ಯಂಗ್ ಮ್ಯಾನ್' ನಾಯಕ ಕೃಷ್ಣಮೂರ್ತಿಯ ಮನೋಧರ್ಮಕ್ಕೆ ಸಂತನಂತೆ ಕಾಣುವ ಮಧ್ಯ ವಯಸ್ಕ ರಾಮಕೃಷ್ಣ ಜೋಯಿಸರು ಆಡುವ ಮಾತು ಅದು. ಆ ಮಾತನ್ನು ಜೋಯಿಸರಿಗೆ ಸಾಕ್ಷಾತ್ಕರಿಸಿದವನು ಆ ಊರಿನ 'ಹಸಲರ ತಿಮ್ಮ'.
ಈ ನಾಟಕದ ವಿಶೇಷತೆಗಳಲ್ಲಿ ಬಹುಮುಖ್ಯವಾದದ್ದೂ ಇದೇ. ಎಲ್ಲ ಕಾಲ-ದೇಶಗಳಲ್ಲಿಯೂ ಬದಲಾವಣೆಗೆ ವಿರೋಧಿಸುವ, ತಿರಸ್ಕರಿಸುವ ಗುಂಪು ಮಧ್ಯ ವಯಸ್ಕರದು ಅಥವಾ ವೃದ್ಧರದು. ಆದರೆ ಈ ನಾಟಕದಲ್ಲಿ ಬದಲಾವಣೆಯನ್ನು ತಿರಸ್ಕರಿಸುವುದು 'ಯುವಕ'. ತನ್ನ ಮಾವನಾದ ಜೋಯಿಸರು ಎರಡೂವರೆ ವರ್ಷ ಭಾರತ ದರ್ಶನಕ್ಕೆಂದು ಹೋಗಿ ವಾಪಾಸು ಬರುವ ವೇಳೆಗೆ ಊರಿನಲ್ಲಾದ ಬದಲಾವಣೆಗಳನ್ನು (ಕಿಟ್ಟುವಿನ ಪ್ರಕಾರ ಅನಾಹುತಗಳು) ತನ್ನ ಮಾವನಿಗೆ ಹೇಳುವ ಕಿಟ್ಟು ತನ್ನಲ್ಲಿರುವ ರೋಷವನ್ನು ವ್ಯಕ್ತಪಡಿಸುತ್ತಾ ಊರು ಹಾಳಾಗಿದೆ ಎಂಬುದನ್ನು ಜೋಯಿಸರಿಗೆ ಪ್ರಯತ್ನಪೂರ್ವಕವಾಗಿ ಮನವರಿಕೆ ಮಾಡಿಕೊಡಲು ಹೆಣಗಾಡುತ್ತಾನೆ.
ಊರಿಗೊಂದು ಸೇತುವೆ ಮಂಜೂರಾಗಿದೆ. ಊರಿನ ಹೊಳೆಯಲ್ಲಿ ದಿನಕ್ಕೆರಡು ಬಾರಿ ಓಡಾಡುತ್ತಿದ್ದ ಬೋಟು ದಿನವಿಡೀ ಓಡಾಡುತ್ತಿದೆ. ಬೋಟಿನಲ್ಲಿ ಬರುವ ಜನರ ಅಗತ್ಯಕ್ಕೆ ತಕ್ಕಂತೆ ದಂಡೆಯಲ್ಲಿ 'ನಾಗರೀಕತೆ' ಸೃಷ್ಟಿಯಾಗಿದೆ. ಇದರೊಂದಿಗೆ ನದಿಯಲ್ಲಿ ಅವ್ಯಾಹತವಾಗಿ ಮರಳು ಗಣಿಗಾರಿಕೆಯೂ ಕೂಡಾ ನಡೆದಿದೆ. ಹೊಳೆ ದಂಡೆಯಲ್ಲಿರುವ ಯಾವುದೇ ಊರಿನ ಜನ ತಮ್ಮನ್ನು ತಾವು ನೇರವಾಗಿ ಸಮೀಕರಿಸಿಕೊಳ್ಳಬಹುದಾದ ನಾಟಕ ಇದು.
ಮರಳು ಲೋಡಿಗೆ ಹೋಗುವ ಜನರಿಗೆ ಕೈ ತುಂಬಾ ಕೂಲಿ ಸಿಗುತ್ತಿರುವುದರಿಂದ ಗದ್ದೆ-ತೋಟದ ಕೆಲಸ ಮಾಡಲು ಜನ ಸಿಗುತ್ತಿಲ್ಲ. ಅದರಿಂದ ಬೆಳೆದ ಬೆಳೆ ಕಳೆದುಕೊಂಡು ಆ ಇಡೀ ಆಕ್ರೋಶವನ್ನು ತನಗೆ ತಿಳಿದ ಎಲ್ಲ ರೀತಿಯಲ್ಲೂ ವ್ಯಕ್ತಪಡಿಸಲು ಕಿಟ್ಟು ಹೆಣಗುತ್ತಾನೆ.
ಹಾಗಾದರೆ ಹೆಚ್ಚು ಕೂಲಿ ಸಿಗುವಲ್ಲಿ ಕೆಲಸ ಮಾಡುವುದು ತಪ್ಪಾ? ಕಿಟ್ಟು ತನಗೆ ಆಳುಗಳು ಸಿಗುತ್ತಿಲ್ಲ ಅಂತ ಸ್ವಾರ್ಥ ಭಾವನೆಯಿಂದ ಹೀಗೆ ಎಲ್ಲರೂ ಹಾಳಾಗುತ್ತಿದ್ದಾರೆ ಅಂತ ಅಸೂಯೆ ಮಿಶ್ರಿತ ಆರೋಪ ಮಾಡುತ್ತಿದ್ದಾನೆಯೆ? ಅಥವಾ ಅನ್ನ ಬೆಳೆಯುವ ಕೆಲಸ ಬಿಟ್ಟು ನದಿಯ ಒಡಲ ಬಗೆವ ದಂಧೆಗೆ ಅನ್ನ ಕೊಡುವ ಕೃಷಿ ಕೂಲಿ ಕಾರ್ಮಿಕರು ಮನಸ್ಸು ಮಾಡಿದ್ದರ ನೋವು ಕಿಟ್ಟುವಿಗಿದೆಯಾ? ಈ ಪ್ರಶ್ನೆಗಳು ನಮಗೆ ಬಂದರೂ ಮುಂದುವರೆದು ಕಿಟ್ಟು ಊರ ಬದಲಾವಣೆಗಳನ್ನು ಜೋಯಿಸರಿಗೆ ಹೀಗೆ ಕಟ್ಟಿಕೊಡುತ್ತಾನೆ:
ಹೊಳೆ ಪಕ್ಕದಲ್ಲಿದ್ದ ಸಂಕಯ್ಯ ಶೆಟ್ಟಿ ಹೊಳೆಯಿಂದ ಮರೆಳೆತ್ತಿ ದಂಧೆ ಕುದುರಿಸಿಕೊಂಡರೆ, ಚೌಡಿಯ ಪಕ್ಕದಲ್ಲಿ ಮನೆಯಿದ್ದ ವಿಶ್ವಭಟ್ರು ಆ ಮುರುಟು ಕಲ್ಲಿನ ಕಲ್ಲು ಮರಳಿನ ಕಟ್ಟಡ ನಿರ್ಮಿಸಿ ದೇವಸ್ಥಾನ ಮಾಡಿದ್ರು. ಚೌಡಿ-ಚಾಮುಂಡೇಶ್ವರಿ ಆದಳು. ವಿಶ್ವ ಭಟ್ರು ಶ್ರೀ ವಿಶ್ವೇಶ್ವರಾಚಾರ್ಯ, ಧರ್ಮದರ್ಶಿಗಳು, ಶ್ರೀ ಚಾಮುಂಡೇಶ್ವರಿ ಮಹಾಸಂಸ್ಥಾನ ಹೊಳೆಯೂರು ಅಂತ ಬೋರ್ಡ್ ಹಾಕಿಸಿಕೊಂಡ್ರು.!
ಕೆಲವೊಮ್ಮೆ ಆಧುನಿಕತೆಯ ಉಪಉತ್ಪನ್ನಗಳು ಎಷ್ಟು ಆಘಾತಕಾರಿ ಇರುತ್ತವೆ ಎಂಬುದನ್ನು ವಿವರಿಸುವ ಪ್ರಯತ್ನವನ್ನು ಕಿಟ್ಟು ಮಾಡುತ್ತಾನೆ.
ಜೋಯಿಸರು ತುಂಬಾ ಸ್ಥಿತಪ್ರಜ್ಞರು- ಆದರೂ ಅವರೊಳಗೊಂದು ಊರ ಬಗ್ಗೆ ಹೊಯ್ದಾಟವಿದೆ. ಕಿಟ್ಟುವಿನ ಆಕ್ರೋಶಕ್ಕೆ ಅವರು ಹಲವು ಬಾರಿ ತಣ್ಣನೆ ಉತ್ತರ ನೀಡುತ್ತಾರೆ. ಆ ತರಹದ ಎರಡು ಮಾತುಗಳು ಮನಸ್ಸಿನಲ್ಲಿ ನಿಲ್ಲುತ್ತವೆ:
ನೀನು ಯಾವುದನ್ನು ಹಾಳಾಗುತ್ತಿದೆ ಅಂದ್ಕೊಂಡಿದಿಯೋ ಅದು ಹಾಳಾಗುತ್ತಿರುವುದು ಅಲ್ಲದೇ ಬರಿ ಬದಲಾಗುತ್ತಿರುವುದು ಇರಬಹುದು!!
ಭಾರತ ದರ್ಶನ ಮಾಡುವ ಸಮಯದಲ್ಲಿ ಹಲವು ಊರಲ್ಲಿ ಹಲವು ಜನ- ಈ ಊರು ಹಾಳಾಗಿ ಹೋಗಿದೆ, ಈ ಕಾಲ ಹಾಳಾಗಿ ಹೋಗಿದೆ, ಈ ದೇಶ ಹಾಳಾಗಿ ಹೋಗಿದೆ ಅಂದರೇ ವಿನಃ ನಾನು ಹಾಳಾಗಿ ಹೋಗಿದ್ದೇನೆ ಎಂದು ಯಾರೂ ಹೇಳಲಿಲ್ಲ.!
ಇನ್ನು ಜೋಯಿಸರ ಮಗಳು ಭಾಮಾದೇವಿ ಕೂಡಾ ಕಿಟ್ಟುವಿನ ಮನಸ್ಥಿತಿಯ ವಿರುದ್ಧ ಮನಸ್ಥಿತಿಯವಳು. ಆಕೆಯೂ ಕೂಡ ಆಡುವ ಇಂಥದ್ದೇ ಮಾತೊಂದು ಧ್ವನಿಪೂರ್ಣವಾಗಿದೆ:
ಊರು ಇದ್ದಹಾಗೇ ಇದೆ ಅಥವಾ ಇಲ್ಲ!
ಕ್ಷಣಕ್ಷಣಕ್ಕೂ ಹರಿಯೋ ನೀರು ಬದಲಾಗ್ತಾ ಇದ್ರೂ ಹೊಳೆಯ ಹೆಸರನ್ನು ಮಾತ್ರ ಬದಲಾಯಿಸದೇ ಇಟ್ಕೊಂಡಿರ‍್ತೀವಲ್ಲ ಹಾಗೆ!
ಅದೇ ಭಾಮೆ ಎಷ್ಟು ಬೇಗ ಜನ ಬದಲಾಗುತ್ತಾರೆ ಎಂಬುದನ್ನು ಹೇಳುತ್ತಾ ತನ್ನ ಮನೆಕೆಲಸದಾಕೆ ಕೆಲಸಕ್ಕೆ ಇಂದು ಬರುವುದಿಲ್ಲ ಎಂದು ಹೇಳಿ ಫೋನಿಡುವಾಗ Bye ಅಂದಳು ಎಂದು ತಮಾಷೆ ಮಾಡುತ್ತಾಳೆ ಅದನ್ನು ಕೇಳಿದ ಜೋಯಿಸರು ನಕ್ಕು:
ನಾವು ಯಾರನ್ನು ಸಾಮಾನ್ಯ ಜನ ಅಂದುಕೊಂಡಿರುತ್ತೇವೆ ಅವರು ಎಷ್ಟು ಬೇಗ ಹೊಸ ಬದುಕು ಭಾಷೆಗಳಿಗೆ ತೆರೆದುಕೊಳ್ಳುತ್ತಾರೆ ಅಲ್ವ ಎಂದು ಕೇಳುತ್ತಾರೆ
ಅರೆ ಹೌದಲ್ಲ. ತತ್ವ ಸಿದ್ಧಾಂತಗಳ, ಓದು-ವಿದ್ಯೆಗಳ ಹೊಸ ರೀತಿಯ ಮಡಿವಂತಿಕೆಗಳನ್ನು ಮೈಗಂಟಿಸಿಕೊಂಡ ಜನ ಬದಲಾವಣೆಗೆ ಒಗ್ಗಿಕೊಳ್ಳಲು ಅದೆಷ್ಟು ಹೆಣಗುತ್ತಾರೆ! ಆದರೆ ಇದ್ಯಾವುದರ ಹಂಗೇ ಇಲ್ಲದ ಜನ ಅದೆಷ್ಟು ಬೇಗ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ. ಅದು ಅವರ ಅಗತ್ಯ ಹಾಗೂ ಅನಿವಾರ್ಯತೆಯೂ ಹೌದು.
ಹೀಗೆ ಸಾಗುವ ನಾಟಕ ಸಮಷ್ಠಿಯಿಂದ ವ್ಯಷ್ಠಿಯ ಕಡೆಗೆ ಬರುತ್ತದೆ. ತಮ್ಮ ತಮ್ಮ ಕಾಲಬುಡ ಸ್ವಚ್ಛ ಮಾಡಿಕೊಂಡರೆ ದೇಶ ಸ್ವಚ್ಛವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ನಂಬಿರುವ ಜೋಯಿಸರು, ಇದ್ದ ಊರಲ್ಲೇ ಬದುಕುವ ಛಲವಿರುವ ಕಿಟ್ಟು, ಭಾಮೆ ಮತ್ತು ಮದನ (ಜೋಯಿಸರ ಮಗನ ಮಗ) ನಿಗೆ ನಾಟಕವೊಂದನ್ನು ಕಲಿಸಿ ಪ್ರದರ್ಶನಕ್ಕೆ ಅಣಿಮಾಡುತ್ತಾರೆ. ಆಗ ಜೋಯಿಸರಾಡುವ ಮಾತುಗಳು ಕಾಡುತ್ತವೆ:
ನಾಟಕ ಅಂದರೇನು? ಅದು ಆಗಿ ಹೋಗಿರೋ ಭವವನ್ನು ಆಡಿ ತೋರಿಸೋ ಪುನರಾವರ್ತನೆಯಲ್ಲ. ಈ ಭವದಿಂದ ಹುಟ್ಟಿದ ಅನುಭವವನ್ನು ಕಂಡುಕೊಳ್ಳುವ ಆವಿಷ್ಕಾರ. ಅರ್ಥಾತ್ ನಾಟಕ ಅಂದರೆ ಭವ ಮತ್ತು ಅನುಭವದ ಮಧ್ಯೆ ನಡೆಯೊ ಸೇತುಬಂಧನ.
ಈ ಮಧ್ಯೆ ಹೊಳೆಯೂರಿನ ಜಗಳ ಹೊಡೆದಾಟಗಳನ್ನು ನೋಡಿದ ಜೋಯಿಸರ ಗಂಡು ಮಕ್ಕಳು, ಜೋಯಿಸರು, ಕಿಟ್ಟು ಮತ್ತು ಭಾಮೆಯನ್ನು ತಾವಿರುವ ಊರಿಗೆ ಬಂದುಬಿಡಿ, ಈ ಊರು ಉದ್ಧಾರ ಆಗುವ ಹಾಗೆ ಕಾಣುವುದಿಲ್ಲ ಅಂದಾಗ ಸ್ಥಿತಪ್ರಜ್ಞ ಜೋಯಿಸರು ಕೋಪಗೊಂಡು ಆಡುವ ಮಾತುಗಳು ತನ್ನೂರಿನ ಬಗ್ಗೆ ಅಭಿಮಾನವಿಲ್ಲದೇ ಹೊರಗೆ ನಿಂತು ಮಾತನಾಡುವವರಿಗೆಲ್ಲ ನಾಟುತ್ತವೆ ಅಂತ ನನಗನ್ನಿಸುತ್ತದೆ
ಈ ಊರಿನಲ್ಲಿ ನಿಂತು ಬದುಕೋ ತಾಕತ್ತಿಲ್ಲದೇ ಗುಳೇ ಹೋಗಿರೋ ಹೇಡಿಗಳು ನೀವು! ಈಗ ಈ ಊರಲ್ಲಿ ಕಷ್ಟವೋ-ಸುಖವೋ, ಜಗಳವೋ-ಜಂಜಾಟವೋ ಮಾಡಿಕೊಂಡು ಬದುಕುವವರ ಬಗ್ಗೆ ಹೊರಗಡೆ ನಿಂತುಕೊಂಡು ತಣ್ಣಗೆ ವ್ಯಾಖ್ಯಾನ ಮಾಡುತ್ತೀರಲ್ಲಾ ತಾಕತ್ತಿದ್ದರೆ ಈ ಊರಲ್ಲಿ ಬಂದು ಬದುಕಿ. ಇಲ್ಲದಿದ್ದರೆ ಇಲ್ಲಿ ಬದುಕೋರು ಬದುಕ್ತಾರೆ ಆಗದವರು ಸಾಯ್ತಾರೆ ನಿಮ್ಮ ನಿಮ್ಮ ಹಣೆಬರಹವನ್ನು ನೋಡಿಕೊಂಡು ಬಾಯಿ ಮುಚ್ಚಿಕೊಂಡಿರಿ.
ಇನ್ನೂ ಅದೇ ಊರಲ್ಲಿ ಬದುಕಬೇಕೆನ್ನುವ ಕಿಟ್ಟು, ಭಾಮೆ, ಮದನನಿಗೆ ಜೋಯಿಸರು ತಮ್ಮ ಡೈರಿಯಲ್ಲಿ ಬರೆದಿಟ್ಟ ಮಾತು ಅವರ ಮರಣಾನಂತರ ಸಿಗುತ್ತದೆ ಮತ್ತವರಿಗೆ ಅಲ್ಲದೇ ಇದ್ದೂರಲ್ಲೇ ಏನಾದರೂ ಸಾಧಿಸಬೇಕೆನ್ನುವವರಿಗೆ ವೇದವಾಕ್ಯವಾಗುತ್ತದೆ.
ಈ ಊರಿನಲ್ಲೇ ನಿಲ್ತೇವೆ ಅಂತ ನೀವು ತಗೊಂಡಿರೋ ನಿರ್ಧಾರ ತುಂಬ ಮಹತ್ವದ್ದು ಅಂತ ನನಗೆ ಅನ್ನಸ್ತದೆ
ಆದರದು ಸುಲಭದ್ದಲ್ಲ. ಅದಕ್ಕೆ ಹತ್ತಾರು ಕಷ್ಟಕೋಟಲೆಗಳು ಹೊರಗಿನಿಂದ ಒಳಗಿನಿಂದ ನಿಮಗೆ ಎದುರಾಗ್ತವೆ.
ಹಾಡುಗಳನ್ನು, ನಾಟಕಗಳನ್ನು ಕಟ್ಟುತ್ತಾ ಅವನ್ನು ಕಂಡು ಎದುರಿಸೋ ಶಕ್ತಿ ನಿಮಗೆ ಬರಲಿ.
ಈ ನಾಟಕದ ಇನ್ನೊಂದು ಶಕ್ತಿ ಎಂದರೆ ಇದರಲ್ಲಿ ಬಳಕೆಯಾಗಿರುವ ಕತೆ ಹಾಗೂ ಉಪಕತೆಗಳು ಒಂದಕ್ಕೊಂದು ಪೂರಕವಾಗಿಯೂ ಇವೆ. ನೋಡುಗರಿಗೆ ವೈಯಕ್ತಿಕ ನೆಲೆಗಟ್ಟಿನ ಮೇಲೆ ಸ್ವತಂತ್ರ ಅರ್ಥವನ್ನೂ ಕೊಡುತ್ತವೆ. ವಿಶೇಷವಾಗಿ ಪಿನಾಕಿ ಋಷಿಯ ಕತೆ ಕೇಳಿದಷ್ಟೂ ರೋಚಕ.
ಜೊತೆಗೆ ನಾಟಕದ ಸಂಗೀತ ನಾಟಕಕ್ಕೆ ಮತ್ತಷ್ಟು ಮೆರುಗನ್ನು, ಜೀವಂತಿಕೆಯನ್ನು ನೀಡಿದೆ. ಬೇಂದ್ರೆಯವರ 'ಹಕ್ಕಿ ಹಾರುತಿದೆ ನೋಡಿದಿರಾ' ಕವನ ಬಂಡಾಯದ ದನಿಯಾಗಿ, ಬದಲಾವಣೆಯ ಮಾರ್ದನಿಯಾಗಿ ಇಡೀ ನಾಟಕದುದ್ದಕ್ಕೂ ಧ್ವನಿಸಿ ಕಾಡುತ್ತದೆ. ಪ್ರತೀ ಪಾತ್ರವೂ ಜೀವಂತಿಕೆ ಉಳಿಸಿಕೊಳ್ಳುತ್ತದೆ ಪಂಚಾಯ್ತಿ ಉಪಾಧ್ಯಕ್ಷೆಯನ್ನೂ ಸೇರಿ! ಕಲಾವಿದರೆಲ್ಲ ನೀನಾಸಮ್‌ನ ಖ್ಯಾತಿಗೆ ತಕ್ಕಹಾಗೆ ಅಭಿನಯಿಸಿದ್ದಾರೆ. ವೈಯಕ್ತಿಕವಾಗಿ ತಿಮ್ಮನ ಪಾತ್ರ ಸಹಜತೆಗಾಗಿ ಇಷ್ಟವಾಗಿದೆ.
ನಾಟಕದಲ್ಲಿ ಕತೆಯೊಂದನ್ನು ಹೇಳುವಾಗ ಭಾಮೆ ಹೇಳುತ್ತಾಳೆ:
ಕತೆಗಳನ್ನ ನಾವು ಹೇಳಬೇಕಾದ ಅಗತ್ಯ ಇಲ್ಲ. ಹೇಳಿಸಿಕೊಳ್ಳಬೇಕಾದ ಸಮಯದಲ್ಲಿ ಅವೇ ಬಂದು ಕದ ತಟ್ಟುತ್ತವೆ.
ಈಗ ನಾಟಕದ ಲಿಂಕ್ ಇಲ್ಲಿದೆ. ಮಿಸ್ ಮಾಡದೇ ನೋಡಿ click here
ಸೇತುವೆ ಬಂಧವೋ-ಬಂಧನವೋ ತಿಳಿಸಿ
ನಾಟಕ: ಸೇತುಬಂಧನ
ರಚನೆ-ನಿರ್ದೇಶನ: ಕೆ.ವಿ.ಅಕ್ಷರ
ರಂಗಪ್ರಯೋಗ: ನೀನಾಸಮ್ ಹೆಗ್ಗೋಡು
ರಂಗಪ್ರಯೋಗ: ನೀನಾಸಮ್ ಹೆಗ್ಗೋಡು
ತುಂಬಾ ಒಳ್ಳೆಯ ಲೇಖನ ಅಥವಾ ವಿಮರ್ಶೆ.
ReplyDelete����
K v akshara Sir bareyuva prati vakyagalu artha purna.. Mattu ee vimarshe chennagide...
ReplyDelete