ಗುಜರಾತಿ ವ್ಯಂಗ್ಯ ಕಿರುಗತೆಗಳು

ವಿಡಂಬನೆ- ಯಾವುದೇ ಸಾಹಿತ್ಯ ಪ್ರಕಾರದ ಒಂದು ವಿಶಿಷ್ಠ ಸ್ವರೂಪ. ಅತೀ ಗಂಭೀರ ಸನ್ನಿವೇಶವನ್ನು ಕೂಡ ಹಾಸ್ಯದ ಮೂಲಕ ಚುಚ್ಚಿ ಆ ಸನ್ನಿವೇಶವನ್ನು ಬೇರೊಂದು ರೀತಿ ವಿಮರ್ಶಿಸುವ ನೋಟವನ್ನು ಕಲಿಸುತ್ತದೆ ವಿಡಂಬನೆ.

'ಚಿತ್ತರಂಜನೆಯೇ ವಿಡಂಬನೆಯ ಮುಖ್ಯ ಉದ್ದೇಶ; ನಾನಾ ವಿಧದ ಹಾಸ್ಯವೇ ಅದರ ಉಪಕರಣ. ಜೊತೆಗೆ, ವ್ಯಕ್ತಿಯ ಸುಧಾರಣೆಯೊ ಸಮಾಜದ ಸುಧಾರಣೆಯೊ ಅದರ ಇನ್ನೊಂದು ಉದ್ದೇಶವಾಗಿರಬಹುದು. ಅಲ್ಲದೆ, ತನ್ನ ಅಚ್ಚುಕಟ್ಟಾದ ವಿರಚನೆಯಿಂದ, ಅಂದ ಚಂದದಿಂದ, ಅದೂ ಒಂದು ಸಾಹಿತ್ಯ ಸೃಷ್ಟಿಯಾಗಿ ಶೋಭಿಸುವುದು ಸಾಧ್ಯ. ದೂಷಣೆ, ಮೂದಲಿಕೆ, ವ್ಯಂಗ್ಯೋಕ್ತಿ, ಕಟಕಿ, ಚುಚ್ಚುಮಾತು, ಕಹಿನಿಂದೆ-ಇವು ವಿಡಂಬನೆಯ ಪ್ರಮುಖ ಮಾದರಿಗಳು'. (1)

ಇಂತಹ ವಿಡಂಬನೆಯ ಮೂಲಕ ಇತಿಹಾಸದ ಹಲವು ಘಟನೆಗಳನ್ನು ವಾಸ್ತವದ ರಾಜಕೀಯ ಸಾಮಾಜಿಕ ಪ್ರಜ್ಞೆಯನ್ನು ಬೆರೆಸುತ್ತಾ ಇಡೀ ಪುಸ್ತಕವನ್ನು ಓದಿಸಿಕೊಳ್ಳುವುದು ಗುಜರಾತಿ ಸಣ್ಣಕತೆಗಳ ಲೇಖಕ ವಿನೋದ ಭಟ್ಟ ಅವರ 'ಗುಜರಾತಿ ವ್ಯಂಗ್ಯ ಕಿರುಗತೆಗಳು' ಪುಸ್ತಕ.
ಡಿ.ಎನ್.ಶ್ರೀನಾಥ್ ಅವರು ಕನ್ನಡಕ್ಕೆ ತಂದಿರುವ ಈ ಪುಸ್ತಕವನ್ನು ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನ ಮಾಡಿದೆ.

ಪುಸ್ತಕದಲ್ಲಿನ ಒಂದೊಂದು ಕತೆಯೂ ಹಗುರಾದ ವ್ಯಂಗದ ಮೂಲಕ ವಿಶೇಷ ಅರ್ಥ ಕೊಡುತ್ತಾ ವಿಮರ್ಶಾ ಮನೋಭಾವನೆಯನ್ನು ಜಾಗೃತಗೊಳಿಸುತ್ತದೆ. ಅದರಲ್ಲಿನ ಒಂದು ಕಿರುಗತೆ ಹೀಗಿದೆ:

ಕೃಷ್ಣ ಮತ್ತು ಸುದಾಮ

"ಈ ಬಿಳಿ ಸುಳ್ಳನ್ನು ಎಲ್ಲಿಯವರೆಗೂ ಹೇಳ್ತೀಯಾ?" ಸುದಾಮ ಭಗವಾನ್ ಶ್ರೀಕೃಷ್ಣನೆದುರು ಎದೆಯೊಡ್ಡಿ ನಿಂತ

"ಬಿಳಿ ಸುಳ್ಳು?" ಶ್ರೀಕೃಷ್ಣನಿಗೆ ಆಶ್ಚರ್ಯವಾಯಿತು.

"ಅಂದ್ರೆ ಶುದ್ಧ ಸುಳ್ಳು! ಅದು ಯಾವುದು ಅಂತ ಕೇಳ್ತಿದೀಯಾ? ಅದೇ ಬಡತನ ತೊಲಗಿಸಿ ಸಮಾಜವಾದ ತರೋ ವಿಷಯ... ಹೀಗೆ ಸುಳ್ಳು-ಸುಳ್ಳೇ ಆಶ್ವಾಸನೆಗಳ ಆಸೆ ತೋರಿಸಿ ಎಷ್ಟು ದಿನ ಮೋಸದಲ್ಲಿಡುತ್ತೀಯಾ? ಇದುವರೆಗೆ ನೀನು ಅವಿರೋಧವಾಗಿ ಚುನಾಯಿಸಲ್ಪಟ್ಟೆ. ಆದರೆ, ಇನ್ನು ಮುಂದೆ ನೀನು ಅವಿರೋಧವಾಗಿ ಆಯ್ಕೆಯಾಗಲಾರೆ ಎಂಬುದನ್ನು ನೆನಪಿಟ್ಟುಕೋ. ನಿನ್ನ ವಿರುದ್ಧವಾಗಿ ‍ನಾನು ಚುನಾವಣೆಗಳನ್ನೆದುರಿಸುವೆ. ನನ್ನ ಚಿಹ್ನೆ ಗುಡಿಸಲು". ಸುದಾಮ ಸಿಟ್ಟಿನಿಂದ ನೆಲಕ್ಕೆ ಕಾಲು ಬಡಿದು ಶ್ರೀಕೃಷ್ಣನ ಅರಮನೆಯಿಂದ ಹೊರಟುಹೋದ.

ಮೂರು ತಿಂಗಳುಗಳೇ ಕಳೆದವು. ಸುದಾಮ ಜನರನ್ನು ಸಂಪರ್ಕಿಸುತ್ತಾ ತನ್ನ ಮನೆಗೆ ಬಂದ. ತನ್ನ ಗುಡಿಸಲು ಕುಸಿದು ಬಿದ್ದಿರುವುದನ್ನು ಕಂಡು ಸುದಾಮ 'ಮೋಸ-ಮೋಸ' ಎಂದು ಗುಲ್ಲೆಬ್ಬಿಸಿದ. ಪಕ್ಕದಲ್ಲಿ ತಲೆಯೆತ್ತಿ ನಿಂತಿದ್ದ ಅರಮನೆಯಿಂದ ಸುದಾಮನ ಹೆಂಡತಿ ಓಡೋಡಿ ಬಂದು ಹೇಳಿದಳು, "ಹೀಗೇಕೆ ಕೂಗಾಡ್ತಿದ್ದೀರ? ಜನರೆಲ್ಲ ಸೇರಿದ್ದಾರೆ... ನಿಮ್ಮ ಮಿತ್ರ ಶ್ರೀಕೃಷ್ಣನೇ ನಮಗಾಗಿ ಈ ಅರಮನೆಯನ್ನು ಕಟ್ಟಿಸಿಕೊಟ್ಟಿದ್ದಾನೆ..." ಸುದಾಮನ ಹೆಂಡತಿ ಸುದಾಮನ ಬಳಿಗೆ ಬಂದು ಅವನ ಕಿವಿಯಲ್ಲಿ ಮೆಲ್ಲಗೆ ಉಸುರಿದಳು, "ಶ್ರೀಕೃಷ್ಣನೇ ಖುದ್ದಾಗಿ ಬಂದಿದ್ದ. ಸಮಾಜವಾದ ಮತ್ತು ಬಡತನ ನೀಗಿಸುವ ಹೆಸರಿನಲ್ಲಿ ಆ ಮೂರ್ಖ ಸುದಾಮ ನನ್ನ ವಿರುದ್ಧ ಪ್ರಚಾರ ಮಾಡಬಾರದೆಂದು ನಿಮಗೆ ತಿಳಿಸಲು ಹೇಳಿದ್ದಾನೆ... ನೀವು ಚುನಾವಣೆಯಿಂದ ನಿಮ್ಮ ಹೆಸರನ್ನು ವಾಪಾಸ್ ತೆಗೆದುಕೊಳ್ಳಬೇಕಂತೆ. ಯಾಕೆಂದರೆ ಅವನು ನಿಮ್ಮ ಬಡತನವನ್ನು ತೊಲಗಿಸಿದ್ದಾನಂತೆ..."

ಗುಜರಾತಿ ವ್ಯಂಗ್ಯ ಕಿರುಗತೆಗಳು
ಮೂಲ: ವಿನೋದ ಭಟ್ಟ
ಕನ್ನಡಕ್ಕೆ: ಡಿ.ಎನ್.ಶ್ರೀನಾಥ್
ಪ್ರಕಾಶನ: ಅಂಕಿತ ಪುಸ್ತಕ, ಬೆಂಗಳೂರು.

(1) ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ

Comments