ಹಟ್ಟೆವ್ವನ ಹಬ್ಬ- ಜನಪದರ ದೀಪಾವಳಿ



ಬೆಳಕಿನ ಹಬ್ಬ, ದೀಪಗಳ ಹಬ್ಬ, ನರಕ ಚತುರ್ದಶಿ, ಲಕ್ಷ್ಮೀ ಪೂಜೆ ಮತ್ತು ಬಲಿ ಪಾಡ್ಯಮಿ ಹೀಗೆ ಹಲವು ವಿಶೇಷಣಗಳನ್ನು ಹೊಂದಿರುವ ಹಬ್ಬ ದೀಪಾವಳಿ. ಆಚರಣೆಗಳಿಗೆ ತನ್ನದೇ ಆದ ಪೌರಾಣಿಕ ಹಿನ್ನೆಲೆಗಳೂ ಕೂಡ ಇವೆ. ಆದರೆ ಅಬ್ಬರವೇ ಆಚರಣೆಯಾಗಿರುವ ಈಗಿನ ದಿನದಲ್ಲಿ ಆಡಂಬರದ, ತೋರಿಕೆಯ, ಉಳ್ಳವರ ಮತ್ತು ಉಳ್ಳವರೆಂದು ತೋರಿಸಿಕೊಳ್ಳುವವರ ಹಬ್ಬವಾಗಿ ಆಚರಣೆಯಾಗುತ್ತಿರುವ ಹಬ್ಬಕ್ಕೆ ಜನಪದದ ಆಯಾಮವೂ ಒಂದಿದೆ. ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿರುವ ದೀಪಾವಳಿಗೆ ಮೈಸೂರು ಭಾಗದಲ್ಲಿ ಕೊಂತ್ಯಮ್ಮನ ಹಬ್ಬ, ಮಲೆನಾಡಿನ ಭಾಗದಲ್ಲಿ ಅಂಟಿಗೆ-ಪಿಂಟಿಗೆ ಮತ್ತು ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಹಟ್ಟೆವ್ವನ ಹಬ್ಬ ಎಂದೂ ಆಚರಿಸುತ್ತಾರೆ.

ಪೌರಾಣಿಕ ಹಿನ್ನೆಲೆ:
ದಿನವು ವಿರಾಟರಾಜನ ಗೋವುಗಳನ್ನು ಕೌರವರಿಂದ ಬಿಡಿಸಿಕೊಂಡು ಪಾಂಡವರು ವಿರಾಟನಗರಿಯನ್ನು ಪ್ರವೇಶಿಸುವ ಮತ್ತು ಅಂದೇ ಅವರ ಅಜ್ಞಾತವಾಸ ಕೊನೆಗೊಳ್ಳುವ ದಿನ ಎಂದು ಜನಪದರು ನಂಬುತ್ತಾರೆ.

ಜಾನಪದ ಆಚರಣೆ:
ಹೀಗೆ ಗೋವುಗಳೊಂದಿಗೆ ವಿರಾಟನಗರಿ ಪ್ರವೇಶಿಸುವ ಪಾಂಡವರನ್ನು ಸ್ವಾಗತಿಸಲು ಆಚರಿಸುವ ಹಬ್ಬವೇ ಹಟ್ಟೆವ್ವನ ಹಬ್ಬ. ರೈತಾಕಿ ಮನೆಗಳಲ್ಲಿ ಇಡೀ ಮನೆಯನ್ನು, ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ಅಂದು ದನಕರುಗಳು ಹಾಕಿದ ಸಗಣಿಯನ್ನು ಒಂದೆಡೆ ಸಂಗ್ರಹಿಸಿ ಸಗಣಿಯಿಂದ ಕೊಂತ್ಯಮ್ಮ ಮತ್ತು ಪಾಂಡವರನ್ನು ಮಾಡಿ ಪೂಜಿಸುವ ಹಬ್ಬ ಹಟ್ಟೆವ್ವನ ಹಬ್ಬ. ಸಗಣಿಯಿಂದ ಮಾಡಿದ ಮೂರ್ತಿಗೆ ಹಟ್ಟೆವ್ವ ಎಂದು ಕರೆಯುತ್ತಾರೆ. ಕೊಂತ್ಯಮ್ಮ ಎಂದರೆ ಕುಂತೀದೇವಿ ಎಂಬುದರ ಜನಪದ ರೂಪ. ಹಟ್ಟೆವ್ವನನ್ನು ತುಂಬೆ ಹೂವು, ಉತ್ರಾಣಿ ಕಡ್ಡಿ, ಹಾಲುಮೊಸರು ಕಡ್ಡಿ ಮತ್ತು ಹೊನ್ನಾರಿಕೆ ಹೂವಿನಿಂದ ಅಲಂಕರಿಸಲಾಗುತ್ತದೆ. ಮನೆಯ ತುಂಬಾ ಗೋವಿನ ಪಾದದ ಹೆಜ್ಜೆ ಗುರುತುಗಳನ್ನು ಬಿಡಿಸಿ ಗೋವುಗಳನ್ನು ಪಾಂಡವರನ್ನು ಮನೆ ತುಂಬಿಸಿಕೊಳ್ಳಲಾಗಿದೆ ಎಂದು ಸೂಚಿಸಿ ಆಚರಿಸುವ ಹಬ್ಬಕ್ಕೆ ಜನಪದರ ಜೀವನದಲ್ಲಿ ಇಂದಿಗೂ ವಿಶೇಷ ಸ್ಥಾನವಿದೆ.

ಹಟ್ಟೆವ್ವನನ್ನು ಮಾಡಲು ಸಗಣಿಯನ್ನೇ ಯಾಕೆ ಬಳಸುತ್ತಾರೆಂದರೆ, ರೈತರ ಮನೆಗಳಲ್ಲಿ ಅತಿ ಸುಲಭವಾಗಿ ಸಿಗುವ ಅತ್ಯಂತ ಪವಿತ್ರವಾದ ವಸ್ತು ಎಂದರೆ ಸಗಣಿ. ಅದಕ್ಕೆ ದೈವೀಕ ಅಂಶವೂ ಇದೆ. ಆಯುರ್ವೇದಿಕ ಅಂಶವೂ ಇದೆ. ಜೊತೆಗೆ ಹಟ್ಟೆವ್ವನ ಪೂಜೆಗೆ ಬಳಸುವ ಹೂಗಳು ಕೂಡ ಕೃಷಿಕನಿಗೆ ಸಹಜವಾಗಿ ಸಿಗುವ ಹೂಗಳು. ಹೀಗೆ ಪ್ರಕೃತಿದತ್ತ ವಸ್ತುಗಳಿಂದ ಸಿಂಗಾರಗೊಳ್ಳುವ ಹಟ್ಟೆವ್ವ ಜನಸಾಮಾನ್ಯರ ದೇವರಾಗುತ್ತಾಳೆ. ಹಬ್ಬ ಮುಗಿದ ಮೇಲೂ ಹಟ್ಟೆವ್ವನನ್ನು ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಇಡುತ್ತಾರೆ. ಹೀಗೆ ಪೂಜೆಗೊಳ್ಳುವ ಹಟ್ಟೆವ್ವ ಕೆಳಗಿನ ಜಾನಪದ ತ್ರಿಪದಿಯಂತೆ ತಮ್ಮನ್ನು ಹರಸುತ್ತಾಳೆ ಎಂದು ಜನಪದರು ನಂಬುತ್ತಾರೆ.

ಹಿಡಿದಂಥ ಕೊಂಬೆ ಎರಡಾಗಿ ಹೆಚ್ಚಲಿ
ತೆಗೆಸಿದ ಬಾವಿ ಜಲವಿರಲಿ- ಕಟ್ಟಿದ
ಕಪಿಲೆಯು ಹಾಲು ಕರೆಯಲಿ- ಧರ್ಮರು
ಮೆಟ್ಟಿದ ಭೂಮಿ ಬೆಳೆಯಲಿ.

ಪ್ರತಿಯೊಂದು ಹಬ್ಬವೂ ನಮ್ಮ ಪರಂಪರೆಯ ಪ್ರತೀಕವೇ ಹೊರತು ಆಡಂಬರದ ತೋರಿಕೆಯಲ್ಲ. ಪ್ರತಿ ಹಬ್ಬದ ಪದರವನ್ನ ಬಿಡಿಸುತ್ತಾ ಹೋದಾಗಲೇ ಅದರ ಮಹತ್ವ ನಮಗೆ ತಿಳಿಯುವುದು. ನಮಗೀಗ ಕೈಯಲ್ಲೇ ಜಗತ್ತಿನ ಎಲ್ಲ ಮಾಹಿತಿ ಸಿಗುತ್ತದೆ. ಇನ್ನಷ್ಟು ಸಂಶೋಧನಾಶೀಲರಾಗಿ ಹಬ್ಬಗಳನ್ನು ಆಚರಿಸೋಣ. ಡಂಭಾಚಾರವನ್ನು ಬಿಡೋಣ. ಹಟ್ಟೆವ್ವ ಒಳ್ಳೇದನ್ನ ಮಾಡಲಿ. ದೀಪಾವಳಿ ಶುಭ ತರಲಿ.

ಆಕರ:
ಜನಪದ ಗೀತಾಂಜಲಿ- ಸಂ.ಡಾ.ದೇ.ಜವರೇಗೌಡ-ಸಪ್ನ ಬುಕ್ ಹೌಸ್- 2012
ಉದಯವಾಣಿ- ನವೆಂಬರ್ 07, 2015
www.honalu.net

Comments

  1. ಆಹಾ..! ನನ್ನ ಚಿಗಟೇರಿಯ ಬಾಲ್ಯದ ದೀಪಾವಳಿ ಕಣ್ಮುಂದೆ ಬಂತು... ಜನಪದ & ಪೌರಾಣಿಕ ಹಿನ್ನೆಲೆ ಗೊತ್ತಿರಲಿಲ್ಲ... ಧನ್ಯವಾದ ನಿಮ್ಮ ಹಂಚುವ ಮನಸಿಗೆ 😊🙏

    ReplyDelete
  2. ಇವತ್ತು ಬೆಳಗ್ಗೆ ಆಕಳ ಶಗಣಿ ಹುಡುಕಾಡಿ ತಂದಿದ್ದಕ್ಕೂ ಸಾರ್ಥಕವಾಗಿತು.☺️ . ಧನ್ಯವಾದ .

    ReplyDelete
  3. ನಾವು ಸಹ ಹಟ್ಟವ್ವನ ಹಬ್ಬಾ ಎಂದು ಆಚರಿಸುತ್ತೇವೆ ಆದರೆ
    ಪೌರಾಣಿಕ ಹಿನ್ನೆಲೆ ಗೊತ್ತಿರ್ಲಿಲ್ಲ
    ಧನ್ಯವಾದಗಳು

    ReplyDelete
  4. ಹಬ್ಬದ ಪ್ರತೀ ಹೇಳೇ ಹೆಳೇಯನ್ನು ಮನ ಮುಟ್ಟುವಂತೆ ಬರೆದಿರುವಿರಿ ಸರ್ ಒಳ್ಳೆಯ ಸಂಗ್ರಹಣೆ ಮಾಹಿತಿಗಾಗಿ ದನ್ಯವಾದಗಳು😊☺️

    ReplyDelete
  5. ತುಂಬಾ ಚೆನ್ನಾಗಿದೆ ಸರ್.. ನಮ್ಮಮ್ಮ ಪಾಂಡವರ ಮೂರ್ತಿ ಮಾಡುವಾಗ ಈ ಪೌರಾಣಿಕ ಕಥೆಯನ್ನ ಹೇಳ್ತಿದ್ದರು.. ಮಾಹಿತಿ ಹಂಚಿದ್ದಕ್ಕಾಗಿ ಧನ್ಯವಾದಗಳು..😊🙏

    ReplyDelete
  6. Gurugale .....sharanu sharanarthi... Nimage nice saati

    ReplyDelete
  7. ಅಮಾವಾಸ್ಯೆ ಮತ್ತು ಪಾಡ್ಯ ಎರಡೂ ಒಂದೇ ದಿನ ಬಂದದ್ದರಿಂದ ಆಕಳ ಸಗಣಿಯನ್ನ ಅಮಾವಾಸ್ಯೆ ದಿವಸ ಕೊಡೋದಿಲ್ಲವೆಂದು ಹೇಳಿದಾಗ ಹುಡುಕಿಕೊಂಡು ಹೋಗಿ ಚಿಟ್ಟಿ ತಂದಮ್ಯಾಲೆ ಪಂಚಪಾಂಡವರು ಪಂಚಭೂತಗಳ ಸಮತೋಲನ ನಮ್ಮ ದೇಹದಲ್ಲಿ ಸಮತೋಲನದಲ್ಲಿದ್ದು ನಾವು ಅವುಗಳೊಂದಿಗೆ ಸಮತೋಲನದಲ್ಲಿದ್ದಾಗ ದೇಹದ ಆರೋಗ್ಯ ಸಾಧ್ಯ ,ಎಂದು ಮಕ್ಕಳಿಗೆ ಹೇಳಿದಾಗ ಅವರ ಕಣ್ಣಿನಲ್ಲಿ ಬೆರಗಿನ ಮಿಂಚು ಹೂಳೆದಂತೆ ಆಯಿತು.

    ReplyDelete
  8. ಹಟ್ಟೆವ್ವನ ಹಬ್ಬದ ಬಗ್ಗೆ ನಮ್ಮ ಪರಂಪರೆಯ ಬಗ್ಗೆ ಮಾಹಿತಿ ನಿಡಿದಕ್ಕಾಗಿ ಧನ್ಯವಾದಗಳು

    ReplyDelete

Post a Comment