ನಿಮ್ಮ ಮಕ್ಕಳು ನಿಮ್ಮವರಲ್ಲ
ಅವರು ಸ್ವತಃ ಬದುಕಿನ ಮಕ್ಕಳು
ಅವರು ನಿಮ್ಮ ಮೂಲಕ
ಜಗತ್ತಿಗೆ ಬರುತ್ತಾರೆ; ನಿಮ್ಮಿಂದಲ್ಲ.
ನಿಮ್ಮೊಂದಿಗೇ ಸದಾ ಇದ್ದರೂ
ಅವರು ನಿಮಗೆ ಸೇರಿದವರಲ್ಲ.
ನೀವು ಅವರಿಗೆ ನಿಮ್ಮ ಪ್ರೀತಿಯನ್ನು ನೀಡಬಹುದು;
ನಿಮ್ಮ ವಿಚಾರಗಳನ್ನಲ್ಲ.
ನೀವು ಅವರ ದೇಹಗಳನ್ನು ಸಲುಹಬಹುದಷ್ಟೇ;
ಅವರ ಆತ್ಮಗಳನ್ನಲ್ಲ.
ಏಕೆಂದರೆ ಅವರ ಆತ್ಮಗಳು,
ನೀವು ಕನಸಿನಲ್ಲೂ ಜೀವಿಸಲಾಗದ
ನಾಳೆಗಳ ಮನೆಗಳಲ್ಲಿ ಆಶ್ರಯ ಪಡೆದಿವೆ.
ನೀವು ಅವರಂತಾಗಲು ಪ್ರಯತ್ನಿಸಬಹುದು
ಆದರೆ ಅವರನ್ನು ನಿಮ್ಮಂತಾಗಿಸಲು ಹವಣಿಸಬೇಡಿ
ಏಕೆಂದರೆ, ಬದುಕು ಹಿಂದಕ್ಕೆ ಚಲಿಸುವುದೂ ಇಲ್ಲ,
ನಿನ್ನೆಗಳೊಂದಿಗೆ ಬದುಕುವುದೂ ಇಲ್ಲ.
ನೀವು, ನಿಮ್ಮ ಮಕ್ಕಳೆಂಬ ಬಾಣಗಳನ್ನು
ಗುರಿಯೆಡೆಗೆ ತಲುಪಿಸಲು ಇರುವ ಬಿಲ್ಲುಗಳು.
ಅವು ಸ್ಪಷ್ಟವಾಗಿ, ನಿಖರವಾಗಿ ಗುರಿ ತಲುಪಲೆಂದೆ
ಬಿಲ್ಲುಗಾರ ನಿಮ್ಮನ್ನು ಹಲವು ಬಾರಿ ಬಾಗಿಸುವುದು.
ನೀವು ಬಾಗುವುದರಿಂದ ಬಾಣಗಳು
ಗುರಿ ತಲುಪುತ್ತವೆಂದರೆ, ಬಾಗುವುದರಲ್ಲೂ ಖುಷಿಯಿರಲಿ. ಏಕೆಂದರೆ,
ಅವನು,
ಚಲಿಸುವ ಬಾಣಗಳನ್ನೆಷ್ಟು ಪ್ರೀತಿಸುವನೋ,
ಬಾಗುವ ಬಿಲ್ಲುಗಳನ್ನೂ ಅಷ್ಟೇ ಪ್ರೀತಿಸುವನು.
ಕನ್ನಡಕ್ಕೆ: ಪರಶುರಾಮ ನಾಗೋಜಿ
Super sir.....
ReplyDelete