ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು

ನಾನು ಸಿನೆಮಾಗಳನ್ನು ಒಮ್ಮೆ ನೋಡುವುದೇ ಕಷ್ಟ. ಅಂಥದ್ದರಲ್ಲಿ ಈ ಸಿನೆಮಾ ತನ್ನನ್ನು ಮೂರು ಸಾರಿ ನೋಡಿಸಿಕೊಂಡಿದೆ! ಹೌದು ಇಡೀ ಸಿನೆಮಾದಲ್ಲೊಂದು ಸೆಳೆತವಿದೆ. ಅದು ಏನು ಎಂದು ಹುಡುಕಿದರೆ ಸಿಗುವುದು ಹಲವು ಕಾರಣಗಳು.

ಈ ಸಿನೆಮಾವನ್ನ ಮೊದಲು ನೋಡಿದ್ದು ಮೈಸೂರಲ್ಲಿ. ಹೋದ ಕೆಲಸ ಬೇಗ ಮುಗಿದು ರೈಲು ಹೊರಡೋದಕ್ಕೆ ಎಂಟು ತಾಸು ಸಮಯ ಇದ್ದಾಗ ಮೈಸೂರಿನ ನಗರ ಬಸ್‌ ನಿಲ್ದಾಣದ ಎದುರಿನ ಗರುಡ ಮಾಲ್‌ನಲ್ಲಿ ಕಂಡ ಪೋಸ್ಟರ್ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು. ಕೊಡುಗೆ: ರಾಮಣ್ಣ ರೈ.

ವಯೋಸಹಜ ತುಂಟತನಗಳಿರುವ, ತೀರಾ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಹುಡುಗರ ಗುಂಪು, ಮತ್ತವರ ಶಾಲೆ ಸಿನಿಮಾದ ಮೇಲ್ನೋಟಕ್ಕೆ ಕಾಣುವ ಕತೆಯ ವಸ್ತು.

ಆದರೆ ಈ ಸಿನಿಮಾದ ನಿಜವಾದ ಕೇಂದ್ರ ಗಡಿನಾಡಿನ ಕನ್ನಡ ಸರ್ಕಾರಿ ಶಾಲೆ.
ಒಂದು ಶಾಲೆ ಸಿನಿಮಾದ ಹಿರೋ ಆಗಿರುವುದು ಬಹುಶಃ ಇದೇ ಮೊದಲೆನಿಸುತ್ತದೆ. ಆ ಕಾರಣಕ್ಕಾಗಿಯೇ ಸಿನೆಮಾದಲ್ಲಿ ಯಾವ ಪಾತ್ರ ಬಂದು ಹೋದರು ಅದೇ ಲವಲವಿಕೆ ಇಡೀ ಸಿನೆಮಾದುದ್ದಕ್ಕೂ, ಕಡೇವರೆಗೂ ಇರುತ್ತದೆ.

ಈ ಸಿನೆಮಾ ಹಲವು ಹಂತಗಳಲ್ಲಿ ಸಂಕೇತಗಳ ಮೂಲಕ ಹಲವಾರು ಪ್ರಶ್ನೆಗಳನ್ನು ಹಾಗೇ ಉಳಿಸುತ್ತದೆ ಎನ್ನುವುದನ್ನು ನಾವು ಗಮನಿಸಬೇಕು.

ತನ್ನಮ್ಮನಿಗೆ ಮಾತು ಕೊಟ್ಟು 'ಇದೇ ಶಾಲೆಯಲ್ಲಿ ಮೇಷ್ಟ್ರಾಗುತ್ತೇನೆ ಅಮ್ಮ' ಅಂದಿದ್ದ ಮುಖ್ಯೋಪಧ್ಯಾಯರು ಶಾಲೆ ಮುಚ್ಚಲು ಆದೇಶ ಬಂದಾಗ ಅಮ್ಮನನ್ನೇ ಕಳೆದುಕೊಂಡಷ್ಟು ನೋವು ಪಟ್ಟರೂ ಶಾಲೆಯ ಮುಂದಿನ ಸಣ್ಣ ಗಿಡವೊಂದಕ್ಕೆ ದಿನಾಲೂ (ಶಾಲೆ ಮುಚ್ಚಲು ಆದೇಶಿಸಿದ ಮೇಲೂ) ನೀರುಣಿಸುವುದನ್ನು ನೋಡಿದಾಗ ಅವರಲ್ಲೊಬ್ಬ ಗಾಂಧೀ ಕಾಣುತ್ತಾರೆ. ಮುಂದೆ ಕ್ಲೈಮ್ಯಾಕ್ಸ್‌ನಲ್ಲಿ ಮಹೇಂದ್ರ ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತಾನೆ. ಆ ಎರಡೂ ದೃಶ್ಯಗಳ ಮಧ್ಯೆ ಹಲವು ಸಾಮ್ಯತೆಗಳಿವೆ. ಅದರಲ್ಲಿ ಬಹು ಮುಖ್ಯವಾದದ್ದು: ಎಂಥ ಆತಂಕದ ಪರಿಸ್ಥಿತಿಯಿದ್ದರೂ ಭವಿಷ್ಯದ ಕನಸು ಕಟ್ಟುವುದನ್ನು ನಿಲ್ಲಿಸಬಾರದು ಎಂಬುದು.

ಮಂಗಳೂರಿನ ಗಡಿಗೆ ಹೊಂದಿಕೊಂಡಿರುವ ಕೇರಳದ ಕಾಸರಗೋಡಿನ ಕನ್ನಡ ಶಾಲೆಗಳ ಪರಿಸ್ಥಿತಿಯನ್ನು ವಿವರಿಸಲು ಮಾಡಿರುವ ಪ್ರಯತ್ನ ಅತ್ಯಂತ ಹೃದಯಸ್ಪರ್ಶಿ. ಆದರೆ ಕರ್ನಾಟಕದ ಗಡಿನಾಡ ಕನ್ನಡ ಶಾಲೆಗಳ ಸ್ಥಿತಿ ಗಡಿ ಒಳಗಿನ ಎಷ್ಟೋ ಶಾಲೆಗಳಿಗೂ ಇದೆ ಅನ್ನುವುದು ಕಠೋರ ವಾಸ್ತವ.

ಒಂದು ಸರಕಾರಿ ಕನ್ನಡ ಶಾಲೆ ಮುಚ್ಚಿದರೆ ಅದರ ಮೇಲೆ ಅವಲಂಬಿತರಾಗಿರುವವರ ಬದುಕು ಏನಾಗುವುದು ಎಂಬುದನ್ನು ಹಲವು ಸಂಕೇತಗಳ ಮೂಲಕ ಸಿನೆಮಾದಲ್ಲಿ ತೋರಿಸಲಾಗಿದೆ.
ಶಾಲೆ ಬಿಟ್ಟು ಬೆಂಗಳೂರಿಗೆ ಸೇರಿ ಅಯ್ಯಂಗಾರ್‍ ಬೇಕರಿ ಸುರು ಮಾಡುವ ಮೇಷ್ಟ್ರು, ಅಡಿಕೆ ಮಾರುವ ಮೇಷ್ಟ್ರು, ಕಣ್ಣೀರಿಡುತ್ತಾ ಹೊಟೆಲ್ ಆರಂಭಿಸುವ ಮೇಷ್ಟ್ರು ... ಇವೆಲ್ಲ ಮೇಷ್ಟ್ರುಗಳ ಪಾಡಾದರೆ, ಮನೆಯ ಕಡೆ ಒಳ್ಳೆ ಪರಿಸ್ಥಿತಿ ಇರುವವರರು  ತಮ್ಮ ಮಕ್ಕಳನ್ನು ಓದಲು ಬೇರೆ ಊರಿಗೋ, ಕಾನ್ವೆಂಟ್ ಶಾಲೆಗೋ ಕಳಿಸಿದರೆ, ಇನ್ನು ಹಲವು ಅಸಹಾಯಕ ಪಾಲಕರು ತಮ್ಮ ತಮ್ಮ ಕಸುಬುಗಳಿಗೆ ತಮ್ಮ ಮಕ್ಕಳನ್ನು ಎಳೆದೊಯ್ಯುವ ವಾಸ್ತವ ಸನ್ನಿವೇಶ ಸಿನೆಮಾದಲ್ಲಿ ಚಿತ್ರಿತವಾಗಿದೆ. ಒಬ್ಬ ಮಗುವಿಗೆ ತನ್ನ ಪರಿಸರದಲ್ಲೇ ಒಳ್ಳೆಯ ಶಿಕ್ಷಣ ಸಿಗದಿದ್ದರೆ ಆ ಮಗು ಅನಿವಾರ್ಯವಾಗಿ ಬಾಲ ಕಾರ್ಮಿಕ ಕೂಡ ಆಗಬಹುದು ಎಂಬುದನ್ನು ಮಮ್ಮುಟ್ಟಿ ಪಾತ್ರ ಸಾರುತ್ತದೆ.

ಸಿನೆಮಾದ ಕ್ಲೈಮಾಕ್ಸ್‌ನಲ್ಲಿ ಹಲವು ಚಪ್ಪಾಳೆ, ಶಿಳ್ಳೆ ಗಿಟ್ಟಿಸುವ ಡಯಲಾಗ್‌ಗಳಿವೆ. ಅದರಲ್ಲಿ ‍ಅತೀ ಕಾಡುವ ಡಯಲಾಗ್ ಅಂದರೆ:
ಯಾರ‍್ಯಾರದೋ ದುರಾಸೆಗೆ
ಯಾರ‍್ಯಾರದೋ ಕುತಂತ್ರಕ್ಕೆ ಕನ್ನಡ ಶಾಲೆಗಳು ಬಲಿಯಾಗುತ್ತಿರುವುದು ದುರಂತ

ಹೌದು ವಾಸ್ತವದಲ್ಲಾಗುತ್ತಿರುವುದೂ ಇದೇ. ನಮ್ಮಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ, ಕಟ್ಟಡ ಸರಿಯಾಗಿಲ್ಲ ಎಂದು ಮುಚ್ಚಲು ಮುಂದಾಗುವ ಸರ್ಕಾರಗಳು ಅವುಗಳ ಸುಧಾರಣೆಗೆ ತೆಗೆದುಕೊಂಡಿರುವ ಕ್ರಮಗಳು ಪ್ರಶ್ನಾರ್ಹ. ಅಥವಾ ಸರಕಾರಕ್ಕೆ ದಾರಿ ತಪ್ಪಿಸಿ ಶಾಲೆ ಮುಚ್ಚಲು ವ್ಯವಸ್ಥಿತ ಸಂಚು ಮಾಡುತ್ತಿರುವ ಅಧಿಕಾರಿ ವರ್ಗ ಇದೆಯೆ? ಎಂಬುದನ್ನು ಸಿನೆಮಾ ಪ್ರಶ್ನಿಸುತ್ತದೆ. ಬರೀ ಸರ್ಕಾರವನ್ನು ದೂಷಿಸಿ ಕೈ ತೊಳೆದುಕೊಂಡರೆ ಜವಾಬ್ದಾರಿ ಮುಗಿಯಿತೆ? ಮುಂದೆ ನವೆಂಬರ್‍ 1 ಬರಲಿದೆ. ನಮ್ಮ ಹಾರಾಟ (ಹೋರಾಟ ಅಲ್ಲ) ರಾಜ್ಯೋತ್ಸವದ ದಿನಕ್ಕೆ ಸೀಮಿತವಾದರೆ ಆಯಿತೆ? ನಮ್ಮಲ್ಲಿ ಎಷ್ಟು ಜನ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉಟ್ಟು ಓರಾಟಗಾರರು ತಮ್ಮ ಮಕ್ಕಳನ್ನ ಕನ್ನಡ ಶಾಲೆಗಳಿಗೆ ಸೇರಿಸಿದ್ದಾರೆ? ಪ್ರಶ್ನಿಸುತ್ತಾ ಹೋದರೆ ಇಡೀ ಸಮಾಜವೇ ಹೊಣೆಗಾರವಾಗುತ್ತದೆ. ಆದರೆ ಇದು ಚರ್ಚೆ, ವಿಮರ್ಶೆಯ ವಿಷಯವಲ್ಲ ಕೆಲಸ ಮಾಡುವ ವಿಷಯ.

ಕೆನ್ಯಾದ ಲೇಖಕ ಎನ್‌ಗೂಗಿ ವಾ ತಿಯಾಂಗ್ವೊ (Ngugi Wa Thiango'o) ತನ್ನ ಡಿ ಕಲೊನೈಸಿಂಗ್ ದ ಮೈಂಡ್  (Decolonizing the Mind) ಕೃತಿಯಲ್ಲಿ  ಹೇಳೋ ಮಾತುಗಳೂ ಅವೇ, ಈ ಸಿನಿಮಾದ ಆಶಯವೂ ಅದೆ. ಒಬ್ಬ ಮಗು ಯಾವ ಭಾಷೆಯಲ್ಲಿ ಕನಸು ಕಾಣುತ್ತದೆಯೋ ಆ ಭಾಷೆಯಲ್ಲೇ ಆ ಮಗುವಿಗೆ ಪ್ರಾಥಮಿಕ ಶಿಕ್ಷಣ ಸಿಗಬೇಕು ಎಂಬುದು.

ಇಷ್ಟೆಲ್ಲ ಗಂಭೀರ ವಿಷಯಗಳನ್ನು ತನ್ನೊಡಲೊಳಗಿಟ್ಟುಕೊಂಡು ಎರಡೂವರೆ ಗಂಟೆ ಒಂದೂ ಕಡೆಯೂ ಬೋರಾಗದಂತೆ ಪ್ರೇಕ್ಷಕರನ್ನು ರಂಜಿಸಿ ಕೊನೆಗೆ ಅವರಲ್ಲೊಂದು ಪ್ರಶ್ನೆಯನ್ನುಳಿಸಿ ಮನೆಗೆ ಕಳಿಸುವುದು ಈ ಸಿನಿಮಾದ ಶಕ್ತಿ. ಆ ನಿಟ್ಟಿನಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡ ಯಶಸ್ವಿಯಾಗಿದೆ. ಮತ್ತು ಅವರು ಅಭಿನಂದನಾರ್ಹರು.

ಈ ಸಿನೆಮಾದಲ್ಲಿ ಸೆಳೆಯುವ ಉಳಿದ ಅಂಶಗಳೆಂದರೆ ಪ್ರತಿ ಪಾತ್ರಕ್ಕೂ ಇರುವ ಹೊಸತನ, ಬೆಣ್ಣೆಯಂತಹ ಕರಾವಳಿ ಕನ್ನಡ, ಅದ್ಭುತ ಸಿನೆಮಾಟೋಗ್ರಫಿ ಮತ್ತು ಸದಾ ನೆನಪಿನಲ್ಲುಳಿಯುವ ಹಾಡುಗಳು.

ಈಗಾಗಲೇ ಸಿನೆಮಾ 50 ದಿನ ಪೂರೈಸಿದೆ. ಸಿನೆಮಾ ಬಗ್ಗೆ ಹಲವು ಒಳ್ಳೆಯ ಮಾತುಗಳು, ವಿಮರ್ಶೆಗಳು ಬಂದಿವೆ. ನನಗನ್ನಿಸಿದ್ದನ್ನ, ಕಾಡಿದ್ದನ್ನ ಇಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದೇನೆ.
ರಿಷಬ್ ಶೆಟ್ಟಿ ಮತ್ತು ತಂಡಕ್ಕೆ ಒಳ್ಳೆ ಸಿನೆಮಾ ಕೊಟ್ಟಿದ್ದಕ್ಕೆ ಕೃತಜ್ಞತೆಗಳು

ಇನ್ನೂ ಸಿನೆಮಾ ನೋಡಿಲ್ಲ ಅಂದರೆ ಒಮ್ಮೆ ನೋಡಿ ಖಂಡಿತಾ ಇಷ್ಟವಾಗುತ್ತದೆ.

ಸಿನೆಮಾ: ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ: ರಾಮಣ್ಣ ರೈ
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ರಿಷಬ್ ಶೆಟ್ಟಿ ಫಿಲ್ಮ್ಸ್
ಛಾಯಾಗ್ರಹಣ: ವೆಂಕಟೇಶ್ ಅಂಗುರಾಜ್
ಸಂಗೀತ: ವಾಸುಕಿ ವೈಭವ್.

Comments

  1. ಒಳ್ಳೆಯ ವಿಮರ್ಶೆ 👍

    ReplyDelete
  2. ತುಂಗಭದ್ರಾ ಹಿರಿಯ ಪ್ರಾಥಮಿಕ ಶಾಲೆ ಹೂವಿನ ಹಡಗಲಿ,ಇದು ನಮ್ಮ ಕತೆ

    ReplyDelete
  3. ತುಂಬಾ ಒಳ್ಳೆಯ ವಿಶ್ಲೇಷಣೆ...
    😊

    ReplyDelete

Post a Comment