“ನಿಮ್ಮ ಹಿಂಸೆಗೆ ಪ್ರತ್ಯುತ್ತರ ನೀಡದವರ ಬಗ್ಗೆ ಎಚ್ಚರದಿಂದಿರಿ- ಒಂದೋ ಅವರೆಂದೂ ನಿಮ್ಮನ್ನು ಕ್ಷಮಿಸುವುದಿಲ್ಲ ಅಥವಾ ನಿಮ್ಮನ್ನು ನೀವು ಕ್ಷಮಿಸಿಕೊಳ್ಳಲು ಬಿಡುವುದಿಲ್ಲ.”
ನಾನು ಬಿ.ಎ. ಅಂತಿಮ ವರ್ಷದಲ್ಲಿದ್ದಾಗ ಇಂಗ್ಲಿಷ್ ನಾಟಕ ಪರಂಪರೆಯ ಆಧುನಿಕ ಅಚ್ಚರಿ ಜಾರ್ಜ್ ಬರ್ನಾಡ್ ಷಾ ಅವರ ‘ದಿ ಆ್ಯಪಲ್ ಕಾರ್ಟ್’ ನಾಟಕವನ್ನು ಪಠ್ಯವಾಗಿ ಓದುವ ಅವಕಾಶ ಲಭಿಸಿತು. ಆ ನಾಟಕ ಮತ್ತು ನಾಟಕಕಾರನ ಪ್ರಭಾವದಿಂದ ಬರ್ನಾಡ್ ಷಾ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುವಾಗ ಹುಬ್ಬೇರಿಸುವಂತೆ ಮಾಡಿದ ಕೊಟೇಷನ್‍ಗಳಲ್ಲಿ ಮೇಲಿನದೂ ಕೂಡಾ ಒಂದು. ಜಾಗತಿಕ ಯುದ್ಧಗಳ ಕಾಲದಲ್ಲಿ ಬದುಕಿ ಬರೆದ ಬರ್ನಾಡ್ ಷಾ ತಮ್ಮ ಯುದ್ಧವಿರೋಧಿ ನಿಲುವನ್ನು ತಿಳಿಸುವ ಪ್ರಯತ್ನವನ್ನು ಆ ಮಾತಿನ ಮೂಲಕ ಮಾಡಿದ್ದಾರೆ. ಮೌನ ಮತ್ತು ಅಹಿಂಸೆ ವ್ಯಕ್ತಿಯೊಬ್ಬನ ಅಸಹಾಯಕತೆಯಾಗಲಿ ದೌರ್ಬಲ್ಯವಾಗಲಿ ಅಲ್ಲ ಬದಲಾಗಿ ಅದು ಒಂದು ಶಕ್ತಿ ಎಂಬ ಮಾತನ್ನು ಮೇಲಿನ ಕೊಟೇಶನ್ ಧ್ವನಿಸುತ್ತದೆ. ಇಂತಹ ಹಲವು ಮಾತುಗಳಿಂದ ಓದುಗರನ್ನು ತನ್ನತ್ತ ಸೆಳೆಯುವ ಮಾಂತ್ರಿಕ ಜಾರ್ಜ್ ಬರ್ನಾಡ್ ಷಾ- ನಮ್ಮೊಳಗಿನ ಅಚ್ಚರಿ!
ಐರ್ಲಂಡ್‍ನ ಡಬ್ಲಿನ್ ಪಟ್ಟಣದ ನಂ.3, ಅಪ್ಪರ್‍ಸಿಂಜ್ ಸ್ಟ್ರೀಟ್‍ನಲ್ಲಿ ಜುಲೈ 26, 1856ರಲ್ಲಿ ಜನಿಸಿದ ಬರ್ನಾಡ್ ಷಾ, ಜಾರ್ಜ್ ಖಾರ್ ಷಾ ಮತ್ತು ಲುಸಿಂಡಾ ಎಲಿಜಬೆತ್ ಗರ್ಲಿ ದಂಪತಿಯ ಮೂರನೇ ಹಾಗೂ ಏಕೈಕ ಗಂಡು ಮಗ. ಮೂಲತಃ ಅಷ್ಟೇನು ಶ್ರೀಮಂತವಲ್ಲದ ಕುಟುಂಬದಲ್ಲಿ ಬೆಳೆದ ಷಾ, ತನ್ನ ಪಾಲಕರಿಂದ, ಪೋಷಕರಿಂದ ಹೆಚ್ಚಿನ ಪ್ರೀತಿಯನ್ನು ಪಡೆಯಲಿಲ್ಲ. “ನಿರ್ಲಕ್ಷ್ಯಕ್ಕೆ ಒಳಗಾದ ಮಕ್ಕಳಿಗಿರುವ ಸೌಭಾಗ್ಯವೆಂದರೆ- ತಮ್ಮ ವ್ಯಕ್ತಿತ್ವವನ್ನು ಮತ್ತು ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಸ್ವಾತಂತ್ರ್ಯ” ಎನ್ನುವಂತೆ ಷಾ ತನ್ನ ಶಿಕ್ಷಣವನ್ನು ಡಬ್ಲಿನ್‍ನ ವೆಸ್ಲಿಯನ್ ಕನೆಕ್ಷಿಯಲ್ ಸ್ಕೂಲ್ ಮತ್ತು ಸೆಂಟ್ರಲ್ ಮಾಡೆಲ್ ಬಾಯ್ಸ್ ಸ್ಕೂಲ್‍ನಲ್ಲಿ ಪಡೆದನು. 1871ರಲ್ಲಿ ತನ್ನ ಸಾಂಪ್ರದಾಯಿಕ ಶಿಕ್ಷಣಕ್ಕೆ ಅಂತ್ಯಹಾಡಿ ಡಬ್ಲಿನ್‍ನ ಎಸ್ಟೇಟ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡನು.
ತನ್ನ ಗೆಳೆಯರೊಟ್ಟಿಗೆ ಲಂಡನ್‍ನ ಕೇಂದ್ರ ಗ್ರಂಥಾಲಯಕ್ಕೊಮ್ಮೆ ಭೇಟಿ ನೀಡಿದಾಗ ಕಾರ್ಲ್‍ಮಾರ್ಕ್ಸ್ ನ ‘ದಾಸ್ ಕಾಪಿಟಲ್’ ಕೃತಿಯನ್ನೋದಿ ಅದರಿಂದ ಅಪಾರ ಪ್ರಭಾವಕ್ಕೊಳಗಾಗುವ ಬರ್ನಾಡ್ ಷಾ, ಮುಂದೆ ತನ್ನನ್ನು ತಾನು ಸಮಾಜವಾದಿಯನ್ನಾಗಿ ಬದಲಾಯಿಸಿಕೊಂಡು “ಜಗತ್ತಿನಲ್ಲಿ ಬಡತನವೇಕಿದೆ?” ಎಂಬ ಪ್ರಶ್ನೆಯೊಂದಿಗೆ ಉತ್ತರದ ಹುಡುಕಾಟಕ್ಕೆ ತೊಡಗುತ್ತಾನೆ.
ನಾಟಕಕಾರನಾಗಿ ಬರ್ನಾಡ್ ಷಾ:
ಕಾದಂಬರಿಕಾರನಾಗಿ ತನ್ನ ಸಾಹಿತ್ಯದ ಬದುಕನ್ನು ಆರಂಭಿಸಿದ ಬರ್ನಾಡ್ ಷಾಗೆ ಆರಂಭದಲ್ಲಿ ಸೋಲುಗಳ ದರ್ಶನವಾಯಿತು. 1879-1883ರ ಮಧ್ಯೆ ಐದು ಕಾದಂಬರಿಗಳನ್ನು (ಫೈವ್ ಅನ್‍ಸಕ್ಸಸ್‍ಫುಲ್ ನಾವೆಲ್ಸ್) ಬರೆದು ಸೋಲನುಭವಿಸುತ್ತಾನೆ. 1888-1894ರ ಅವಧಿಯಲ್ಲಿ ಷಾ ಒಬ್ಬ ಅಧ್ಬುತ ಮ್ಯೂಸಿಕ್ ಕ್ರಿಟಿಕ್ (ಸಂಗೀತ ವಿಮರ್ಶಕ) ಆಗಿ ಹೊರಹೊಮ್ಮುತ್ತಾನೆ. ಅದೇ ಯಶಸ್ಸಿನ ಅಲೆಯಲ್ಲಿ ಷಾನ ಮೊದಲ ನಾಟಕ ವಿಡೋವರ್ಸ್ ಹೌಸಸ್ 1892ರಲ್ಲಿ ಪ್ರಕಟವಾಗುತ್ತದೆ. ಅಲ್ಲಿಂದ ಆರಂಭವಾದ ಷಾನ ಯಶೋಗಾಥೆ ಇಂಗ್ಲಿಷ್ ನಾಟಕ ಪರಂಪರೆಯಲ್ಲಿ ‘ಬರ್ನಾಡ್ ಷಾ ಯುಗ’ವೆಂದೇ ದಾಖಲಾಯಿತು. ಬರ್ನಾಡ್ ಷಾಗೆ ಅದ್ಭುತ ಯಶಸ್ಸನ್ನು ನೀಡಿದ ನಾಟಕಗಳೆಂದರೆ ಕ್ಯಾಂಡಿಡಾ (1894) ಮತ್ತು ‘ಆರ್ಮ್ಸ್ ಆ್ಯಂಡ್ ದ ಮ್ಯಾನ್ (1898)’.
ಬರ್ನಾಡ್ ಷಾನ ನಾಟಕಗಳು ಸಂಭಾಷಣೆ ಕೇಂದ್ರಿತವಾದವುಗಳು. ಡೈಲಾಗ್‍ಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತದ್ದ ಷಾ, ಪದಗಳ ಬಳಕೆಯಿಂದಲೇ ಹಾಸ್ಯವನ್ನು ಸೃಷ್ಟಿಸುತ್ತಿದ್ದ ಅದ್ಭುತ ಪ್ರತಿಭಾವಂತ. ಷಾನ ಇಂತಹ ಪ್ರತಿಭೆಗೆ ಉತ್ತಮ ಉದಾಹರಣೆಯೆಂದರೆ 1912ರಲ್ಲಿ ತೆರೆಕಂಡ ‘ಪಿಗ್ಮೇಲಿಯನ್’ ನಾಟಕ. ಭಾಷೆಯ ಸ್ಪಷ್ಠ ಉಚ್ಛರಣೆ ಗೊತ್ತಿರದ ಹಳ್ಳಿಯ ಹುಡುಗಿಯೊಬ್ಬಳಿಗೆ ಗ್ರಾಂಥಿಕ ಭಾಷೆಯನ್ನು ಸೊಗಸಾಗಿ ಮಾತನಾಡುವಂತೆ ಮಾಡಲು ಪ್ರೊಫೆಸರ್ ಒಬ್ಬ ಪಡುವ ಪೇಚಾಟಗಳನ್ನು ನವಿರಾದ ಹಾಸ್ಯದ ಮೂಲಕ ಷಾ ಕಟ್ಟಿಕೊಡುತ್ತಾನೆ.
ಸಂಭಾಷಣೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದ ಈತನ ನಾಟಕಗಳು ಧ್ವನಿಪೂರ್ಣವಾಗಿರುತ್ತಿದ್ದವು. ಆ ಕಾರಣಕ್ಕಾಗಿಯೇ ವಿದ್ಯಾವಂತ ವರ್ಗಕ್ಕೆ ಸೀಮಿತವಾದವು ಎಂಬ ಅಪವಾದದ ಹೊರತಾಗಿಯೂ ಬಡ, ಮಧ್ಯಮ ವರ್ಗದವರ ಬಗೆಗಿನ ಚಿಂತನೆಗಳನ್ನು ಕೇಂದ್ರವಾಗಿಸಿಕೊಂಡು ಬರೆದರು.
ಬರ್ನಾಡ್ ಷಾ ಬದುಕಿನ ದೃಷ್ಠಿ:
ಮಹಾನ್ ವಾಸ್ತವವಾದಿಯಾದ ಷಾ, ತನ್ನ ಕೃತಿಗಳಲ್ಲಿ ಮನುಷ್ಯ ಸಮಾಜದ ಸೋಗಲಾಡಿತನ, ಮುಖವಾಡಗಳು, ಹುಸಿಭಾವನೆಗಳ ಬಗ್ಗೆ ವಿಮರ್ಶಾದೃಷ್ಠಿಯ ಮೂಲಕ ಸಮಾಜವನ್ನು ಚುಚ್ಚುತ್ತಾರೆ. “ಎಲ್ಲಿಯವರೆಗೂ ನನಗೊಂದು ‘ಕೊರತೆ’ ಇರುತ್ತದೆಯೋ ಅಲ್ಲಿಯವರೆಗೂ ಬದುಕಲು ನನಗೊಂದು ಕಾರಣವಿರುತ್ತದೆ. ತೃಪ್ತಿಯೇ ಮರಣ” ಎನ್ನುವ ಬರ್ನಾಡ್ ಷಾರ ಮಾತು ನನ್ನನ್ನು ಸದಾ ಕಾಡುತ್ತದೆ. ಸಿಕ್ಕಿದ್ದಕ್ಕೆ ತೃಪ್ತಿಪಡುವ ನಮ್ಮ ಮನಸ್ಥಿತಿಗೂ, ತೃಪ್ತಿಯೇ ಮರಣ ಎನ್ನುವ ಷಾರ ಮನಸ್ಥಿತಿಗೂ ಎಷ್ಟೊಂದು ವ್ಯತ್ಯಾಸ?! ಯಾರು ಅತಿಬೇಗ ತೃಪ್ತರಾಗುತ್ತಾರೋ, ಯಾರು ಸ್ವತಃ ತಮ್ಮಿಂದ ಹೆಚ್ಚು ನಿರೀಕ್ಷೆ ಮಾಡಿಕೊಳ್ಳುವುದಿಲ್ಲವೋ ಅವರು ಏನನ್ನೂ ಸಾಧಿಸಲಾರರು.
ಅಪ್ಪಟ ಸಮಾಜವಾದದ ನೆಲೆಗಟ್ಟಿನಲ್ಲಿ ಬದುಕಿ ಬರೆದ ಬರ್ನಾಡ್ ಷಾ ಒಬ್ಬ ನಾಟಕಕಾರ, ಕಾದಂಬರಿಕಾರ, ಸಮಾಜ ವಿಮರ್ಶಕ, ಸಂಗೀತ ವಿಮರ್ಶಕ. ಸಮಾಜದಲ್ಲಿನ ಅಸಮಾನತೆಯನ್ನು, ಢೋಂಗಿತನವನ್ನು, ಮೌಢ್ಯತೆಯನ್ನು ವಿರೋಧಿಸಿ ಬರೆದ ಷಾ 1925ರಲ್ಲಿ ಸಾಹಿತ್ಯಕ್ಕೆ ನೊಬೆಲ್ ಪುರಸ್ಕಾರ ಪಡೆದ ಹೆಗ್ಗಳಿಕೆಗೆ ಪಾತ್ರವಾದರು. ಅಪ್ಪಟ ಸಸ್ಯಾಹಾರಿಯಾಗಿದ್ದ ಬರ್ನಾಡ್ ಷಾ 95 ವರ್ಷಗಳ ಕಾಲ ಬದುಕಿ 1950 ನವೆಂಬರ್ 02ರಂದು ಇಂಗ್ಲೆಂಡ್‍ನ ಹರ್ಟ್‍ಫರ್ಡ್‍ಶೈರ್‍ನಲ್ಲಿ ಮರಣ ಹೊಂದಿದರು.
‘We
have no more right to consume happiness without producing it’ (ಖುಷಿಯನ್ನು ಉತ್ಪಾದಿಸದೇ ಬರಿ ಅನುಭೊಗಿಸಲು ನಮಗೆ ಹಕ್ಕಿಲ್ಲ) ಎಂದ, ಹಾಗೆಯೇ ಬದುಕಿದ ಜಾರ್ಜ್ ಬರ್ನಾಡ್ ಷಾ ನಮ್ಮೊಳಗಿನ ಅಚ್ಚರಿ!
ಉಪಯುಕ್ತ ಲೇಖನ ��
ReplyDeleteಧನ್ಯವಾದ 🙏
Super...
ReplyDelete