ನಾಟಕ: ಗಿರೀಶ್ ಕಾರ್ನಾಡರ 'ರಾಕ್ಷಸ-ತಂಗಡಿ'

"ನೆನಪಾಯ್ತು ಹೇಳುತ್ತೇನೆ . ಹಿಂದೊಮ್ಮೆ ನಾನು ತಿರುಪತಿಯಲ್ಲಿ ಮದುರೈ, ಜಿಂಜಿ, ತಂಜಾವೂರು, ಇಕ್ಕೇರಿ, ಮೈಸೂರು ನಾಯಕರ ಸ್ಥಾನಾಪತಿಗಳ ಜೊತೆಗೆ ಕೂತಿದ್ದೆ ಒಂದು ಸಣ್ಣ ಕಕ್ಷದಲ್ಲಿ-ಒಂದು ಸಣ್ಣ ಕಕ್ಷದಲ್ಲಿ ನಮ್ಮ ಗುಪ್ತ ಸಮಾಲೋಚನೆ ನಡೆದಿತ್ತು. ಹೊರಗೆ ಜನಜಂಗುಳಿ ಕಿಕ್ಕಿರಿದು ನೆರೆದಿತ್ತು. ನಾವು ಐದಾರು ಜನ ಬಿಸಿ-ಬಿಸಿ ಚರ್ಚೆ ನಡೆಸಿದ್ದೆವು. ಇದ್ದಕ್ಕಿದ್ದಹಾಗೆ ನನಗೆ ಉಚ್ಚೆ ಬಿತ್ತರಿಸಿ ಬಂತು. ನಾನು ತಡೆದುಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಎಷ್ಟು ಹೊತ್ತು ಅಂತ ತಡೆದುಕೊಳ್ಳಲಿಕ್ಕಾಗುತ್ತದೆ? ಪಿಳಿಪಿಳಿಯಾಗಿ ಮೂತ್ರ ತೊಟ್ಟಿಕ್ಕಲಿಕ್ಕೆ ಆರಂಭ ಆಯ್ತು.ಬಿರುಸಿನ ಚರ್ಚೆ. ಹೊರಗೆ ಜನರ ಜಾತ್ರೆ. ಎದ್ದು ಹೋಗೋಣ ಎಂದರೆ ಅಪಶಕುನ, ಅವಮಾನ, ಅವಹೇಳನೆ!ಸ್ಥಾನಾಪತಿಗಳು ಏನು ಅರ್ಥ ಮಾಡಿಕೊಳ್ಳುತ್ತಾರೋ ಅಂತ ಆತಂಕ. ಎದ್ದು ಹೋಗುವ ಹಾಗೇ ಇರಲಿಲ್ಲ. ಏನೂ ಆಗದೆ ಇಲ್ಲದಿರೋ ಹಾಗೆ ನನ್ನ ಅನುಭವ, ಅಧಿಕಾರ, ವಿದ್ವತ್ತನ್ನು ಪಣಕ್ಕೆ ಹಚ್ಚಿ ಚರ್ಚೆ ಮುಂದುವರಿಸಿದೆ. ಮೂತ್ರದ ಹನಿ ತೊಟಕತಾನೆ ಇತ್ತು. ನಿಲವಂಗಿಯ ಅಡಿಗೆ ಕಾಣಿಸೋ ಹಾಗಿರಲಿಲ್ಲ. ಅಂದರೂ ಸ್ವಲ್ಪ ಹೊತ್ತಿನಲ್ಲೇ ನಾವು ಕೂತ ಕೋಣೆ ಮೂತ್ರದ ನಾತದಿಂದ ನಾರಲಿಕ್ಕೆ ಹತ್ತಿತು. ನನ್ನ ಮೂಗಿಗಷ್ಟೆ ಅಲ್ಲ. ಅಲ್ಲಿ ಇದ್ದ ಉಳಿದವರ ಮೂಗಿಗೂ ದುರ್ನಾತ ಬಡೀತಾ ಇದೆ ಅಂತ ಅವರ ಮುಖಚರ್ಯೆಯಲ್ಲೇ ಗೊತ್ತಾಗಲಿಕ್ಕೆ ಹತ್ತಿತು. ಆದರೆ ನಾನು ಏನೂ ತೋರಗೊಡಲಿಲ್ಲ. ಅವರೋ ರಾಯಭಾರಿಗಳು- ಮುಖದ ಮೇಲೆ ಏನೊಂದೂ ತೋರಿಸದೆ ನನ್ನ ಮಾತನ್ನು ಕೇಳಿಕೊಂಡರು. ತಲೆಬಾಗಿ ಕೂತರು.ಯಾಕೆ ಹೇಳುತಿದ್ದೇನೆ ಅಂದರೆ ನನ್ನ ಈ ಅಳಿಯತನ, ವಿಜಯನಗರದ ರಕ್ಷಕ ಅನ್ನೋ ಕೀರ್ತಿ ನನಗಂಟಿಕೊಂಡ ಆ ಉಚ್ಚೆಯ ವಾಸನೆ ಇದ್ದ ಹಾಗೆ. ಎಲ್ಲರಿಗೂ ಮೂಗಿಗೆ ಬಡೀತದೆ. ಆದರೆ ಆಡಿಕೊಳ್ಳುವಂತಿಲ್ಲ."
ವಿಜಯನಗರದ ದಂಡನಾಯಕನಾಗಿಯೂ ಅಧಿಕಾರಯುತ ಮಹಾರಾಜನಲ್ಲ ಎಂಬ ಅಸಹನೆಯನ್ನು, ಅವಮಾನವನ್ನು ಈ ರೀತಿಯಾಗಿ 'ಅಳಿಯ ರಾಮರಾಯ' ಗಿರೀಶ್ ಕಾರ್ನಾಡರ ಹೊಸ ನಾಟಕ 'ರಾಕ್ಷಸ-ತಂಗಡಿ'ಯಲ್ಲಿ ಹೊರಹಾಕುತ್ತಾನೆ.

ತನ್ನ ಶಕ್ತಿಯ ಮೇಲೆ ಇದ್ದ ಅತಿಯಾದ ಆತ್ಮವಿಶ್ವಾಸ, ತನ್ನೆದುರೇ ಶತೃಗಳು ಬೆಳೆಯುತ್ತಿದ್ದರೂ ಗಮನಿಸದೇ ನಿರ್ಲಕ್ಷಿಸಿದ ಹುಂಬತನ, ಯಾರಿಗೂ ಅರ್ಥವಾಗದ ರಾಜನೀತಿ, ಕರ್ತವ್ಯ ಪ್ರಜ್ಞೆಯನ್ನು ಮರೆಸಿದ ತನ್ನ ಮೂಲದೆಡೆಗಿನ ಹಂಬಲ, ತನ್ನವರ ಮೇಲಿನ ಅಪನಂಬಿಕೆ; ತನ್ನವರಲ್ಲದವರ ಮೇಲಿನ ಅತಿ ನಂಬಿಕೆ-

ದಕ್ಷಿಣ ಪ್ರಸ್ಥಭೂಮಿಯ ಅಪ್ರತಿಮ ಸಾಮ್ರಾಜ್ಯ ವಿಜಯನಗರದ ಮತ್ತು ಅದರ ಕೊನೆಯ ದಂಡನಾಯಕ 'ಅಳಿಯ ರಾಮರಾಯ' ಎಂಬ ಅಸಮಾನ್ಯ ಸಾಮರ್ಥ್ಯದ ಸೇನಾನಿಯ ಅಂತ್ಯದ ಕಾರಣಗಳಿವು.
ಯಥಾ ಪ್ರಕಾರ ಕಾರ್ನಾಡರು ಇತಿಹಾಸವನ್ನು ಕಣ್ಣೆದುರು ಸೃಷ್ಠಿಸುವ ತಮ್ಮ ಸಾಮರ್ಥ್ಯದಿಂದ ನಮ್ಮನ್ನು ಬೆರಗುಗೊಳಿಸುತ್ತಾರೆ.

ರಾಕ್ಷಸ-ತಂಗಡಿ
ಆಗಸ್ಟ್ 15, 2018ರಂದು ಬಿಡುಗಡೆಯಾದ ಗಿರೀಶ್ ಕಾರ್ನಾಡರ ನಾಟಕ ಇತಿಹಾಸವನ್ನು ಹಲವು ರೀತಿ ಮರು ಓದಲು ಪ್ರೇರೇಪಿಸುತ್ತದೆ.
ರಾಕ್ಷಸ-ತಂಗಡಿ
ಗಿರೀಶ ಕಾರ್ನಾಡ
ಮನೋಹರ ಗ್ರಂಥಮಾಲಾ, ಧಾರವಾಡ

Comments

  1. This comment has been removed by the author.

    ReplyDelete
  2. ಮಹದ್ಗ್ರಂಥ ಬರೆದು ಪಂಡಿತರನ್ನಷ್ಟೇ ತಲುಪುವ ಸೀಮಿತ ಮಾರ್ಗದಾಚೆ, ಚಿಕ್ಕ-ಚೊಕ್ಕ-ಪಕ್ವತೆ ಕೂಡಿದ‌ ಪುಸ್ತಕಗಳನ್ನು ಓದುಗ ವರ್ಗಕ್ಕೆ ಮುಟ್ಟಿಸುವಲ್ಲಿ ಕಾರ್ನಾಡರ‌ ಶ್ರಮ ಬರಹಗಾರರಿಗೆ ಮಾದರಿ. ಅವರ ಭಾಷೆ ಆಪ್ಯವಾದದ್ದು. ಪರುಶುರಾಮ್ ನಾಗೋಜಿ ಸರ್ ಹೇಳುವಂತೆ ಕಾರ್ನಾಡರ ಪುಸ್ತಕಗಳಿಗೆ ಓದಿಸಿಕೊಳ್ಳುವ ಗುಣವಿದೆ.

    ಆ ಸರಳೀಕರಣದ ಗುಣವಿರುವುದಕ್ಕೋ ಏನೋ ನಾಗಮಂಡಲದ ರಾಣಿ ಮಾತಾಡ್ತಾಳೆ ನಮ್ಮ ಜೊತೆ, ಪ್ರಮಾದಗಳೆಸಗಿ ಪರಿತಪಿಸುವ ಗೆಳೆಯನಂತೆ ತುಘಲಕ್ ನಮಗೆ ಆತ್ಮೀಯನಾಗುತ್ತಾನೆ ಪಶ್ನೆಗಳನ್ನು ಹುಟ್ಟಿಸುತ್ತಾನೆ...🙏

    ReplyDelete

Post a Comment