ಜೋಕುಮಾರಸ್ವಾಮಿ ಎಂಬ ನೆಲದ ನಂಟಿನ ದೇವರು


ನಮ್ಮ ಜನಪದರ ಆಚರಣೆಗಳಿಗೂ, ವೈಜ್ಞಾನಿಕ ನಂಬಿಕೆಗಳಿಗೂ ಸದಾ ಒಂದು ತಿಕ್ಕಾಟ ಇದ್ದೇ ಇದೆ. ಅಥವಾ ಜನಪದದ ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ಕಾರಣ ಹುಡುಕುವ, ಕೊಡುವ ಪರಿಪಾಠ ವಿದ್ಯಾವಂತರೆನಿಸಿಕೊಂಡವರೆಲ್ಲರಲ್ಲೂ ಇದೆ. ನಾನೀಗ ಮಾತಾಡಹೊರಟಿರುವುದು ಜನಪದ ಮತ್ತು ವಿಜ್ಞಾನದ ನಡುವಿನ ಸಂಬಂಧಗಳ ಬಗ್ಗೆಯಾಗಲೀ, ವ್ಯತ್ಯಾಸಗಳ ಬಗ್ಗೆಯಾಗಲೀ ಅಲ್ಲ. ಬದಲಾಗಿ ಪ್ರಕೃತಿಯೊಂದಿಗೆ ತಮ್ಮ ಜೀವನ ಬೆಸೆದುಕೊಂಡಿರುವ, ನೆಲದ ಜೊತೆ ನಂಟು ಹೊಂದಿರುವ ಜನಪದರ ಬಹುಮುಖ್ಯ ಆಚರಣೆಗಳಲ್ಲೊಂದಾದ ಜೋಕುಮಾರ ಸ್ವಾಮಿಯ (ಜೋಕಪ್ಪನ) ಬಗ್ಗೆ.

ಪ್ರತಿವರ್ಷ ಗಣಪತಿ ಸತ್ತು (ಗಣಪತಿ ಹಬ್ಬದ ಮೂರನೇ ದಿನ ಗಣಪತಿ ಸಾಯುವದು ಅನ್ನೋದು ನಂಬಿಕೆ) ಮಾರನೇ ದಿನ ಕಿವುಡ ಕ್ಯಾತಪ್ಪ ಹುಟ್ಟಿ ಅಂದೇ ಸಾಯುತ್ತಾನೆ ಮತ್ತು ಅದರ ಮಾರನೇ ದಿನ ಹುಟ್ಟುವುದೇ ಜೋಕಪ್ಪ ಅಂದರೆ ಜೋಕುಮಾರಸ್ವಾಮಿ. ಜೋಕುಮಾರಸ್ವಾಮಿ ಹುಟ್ಟಿದ ದಿನದಿಂದ ಅಳಲು ಎನ್ನುವ ವಾಡಿಕೆಯೂ ಇದೆ. ಹೀಗೆ ಹುಟ್ಟಿದ ಜೋಕುಮಾರ ಸ್ವಾಮಿಯನ್ನು ಹೊತ್ತು ಮನೆಮನೆಗೆ ಬರುವ ತಂಡದವರು ಆತನ ವರ್ಣನೆಯ ಹಾಡುಗಳನ್ನು ಹಾಡುತ್ತಾ ದವಸ-ಧಾನ್ಯಗಳನ್ನು, ಜೋಕಪ್ಪನ ಬಾಯಿಗೆ ಬೆಣ್ಣೆಯನ್ನು ಪಡೆದು ಮುನ್ನಡೆಯುತ್ತಾರೆ. ಇವಿಷ್ಟೂ ಪ್ರಕ್ರಿಯೆಗಳು ಬಾಲ್ಯದಿಂದಲೂ ನನಗೆ ಅಚ್ಚರಿಯ ಸಂಗತಿಗಳು. ‘ಇವತ್ತು ನಿನಗೆ ಬೆಣ್ಣಿ ಇಲ್ಲ; ಒಣ್ಯಾಗ ಜೋಕಪ್ಪ ಬರತಾನಎನ್ನುವ ನನ್ನವ್ವನ ಮಾತುಗಳು ಜೋಕಪ್ಪ ಬರಿ ದೇವರಲ್ಲ ಮನೆಯ ಮಗ ಎನ್ನುವ ಜನಪದರ ಪ್ರೀತಿಯನ್ನು, ಆಪ್ಯಾಯತೆಯನ್ನು ತೋರಿಸುತ್ತವೆ.

ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜನಪದರ ಸ್ವಯಂಘೋಷಿತ ಸಂವಿಧಾನ. ನಂಬಿಕೆಯೇ ಲೇಖನಕ್ಕೆ ಪ್ರೇರಣೆ.

ಇಂತಹ ಅಳಲಿನಲ್ಲಿ ಹೊಸಬಟ್ಟೆ ಖರೀದಿಸಿ ತಂದಂಥ ನನಗೆ ನನ್ನಕ್ಕಅಳಲಿನ್ಯಾಗ ಹೊಸಬಟ್ಟಿ ತರಬಾರದೋಅಂದಳು. ‘ಅಳಲು ಅಂತ ಉಣ್ಣಾದು ಬಿಟ್ಟೀರೇನು?’ ನನ್ನ ಮಾಮೂಲಿ ಉತ್ತರ. ಪುಸ್ತಕದ ಓದಿನ ಗುಂಗಿನ ನನ್ನಂಥ ಅರ್ಧಬೆಂದ ಮೊಟ್ಟೆಗಳು (ಹಾಫ್ ಬಾಯಿಲ್ಡ್ ಎಗ್ಸ್) ಪ್ರತಿಕ್ರಿಯಿಸುವ ರೀತಿ ಇದು. ನನ್ನ ಮಾತಿಗೆ ಪ್ರತಿಕ್ರಿಯಿಸಿದ ನನ್ನ ಇನ್ನೊಬ್ಬ ಅಕ್ಕ: “ನಿಮ್ ಪುಸ್ತಕ ಏನ್ ಹೇಳುತ್ತೋ ಗೊತ್ತಿಲ್ಲಪ್ಪ, ಆದ್ರ ನಂಬಿಕೆ ಏನಂದ್ರ ಜೋಕಪ್ಪ (ಜೋಕುಮಾರಸ್ವಾಮಿ) ಭೂತಾಯಿಯ ಮಗ. ಜೋಕಪ್ಪ ಸತ್ತಮೇಲೆ ಮಗನನ್ನ ಕಳಕೊಂಡ ತಾಯಿ ದುಃಖದಾಗ ಇರತಾಳ. ಭೂತಾಯಿ ಅಂದ್ರ ನಮಗೆಲ್ಲಾ ತಾಯಿ ಅಲ್ಲೇನು? ನಮ್ಮವ್ವ ದುಃಖದಾಗ ಇದ್ರ ಅದು ನಮಗೆಲ್ಲಾ ದುಃಖ ಅಲ್ಲೇನು? ಮತ್ತ ನಮ್ಮವ್ವ ದುಃಖದಾಗ ಇದ್ದಾಗ ನಾವು ಹೊಸಬಟ್ಟಿ ಹಾಕೋದು, ಬಂಗಾರ ಹಾಕೊಳೋದು, ಮನಿಯಾಗ ಶುಭಕಾರ್ಯ ಮಾಡೋದು ಅಂದ್ರ ಏನ್ ಚೆಂದ ಹೇಳು. ಅಷ್ಟ ಅಲ್ಲ ಮಗನನ್ನ ಕಳಕೊಂಡ ತಾಯಿಯ ಬಾಯಿ ವಿಷ ಆಗಿರತಾದಲ್ಲ ಅದಕ್ಕಾ ಮಜ್ಜಿಗಿ, ಮೊಸರು ತಗೊಂಡು ಹೊಲಕ್ಕ ಹೋಗಿ ಭೂತಾಯಿಯ ವಿಷದ ಬಾಯಿ ತೊಳದು ಶಾಂತಿ ಮಾಡಿ ಬರತೀವಲ್ಲ ಅದನ್ನ ಅಳಲು-ಅಂಬ್ಲಿ ಹಬ್ಬ ಅಂತ ಕರೆಯೋದು.”

ಇಷ್ಟು ಹೊತ್ತಿಗೆ ನನ್ನೊಳಗೆ ಹೊಸ ವಿಷಯ ತಿಳಿದುಕೊಂಡ ಧನ್ಯತೆ ಆವರಿಸುತ್ತಿದ್ದರೆ, ನನ್ನಕ್ಕಂದಿರ ಮುಖದಲ್ಲಿ ಇದ್ದ ಅದೇ ವಿನಯತೆ ನನ್ನನ್ನು ಅಣಕಿಸುತ್ತಿತ್ತು. ‘ಓದು ಒಕ್ಕಾಲು; ಬುದ್ಧಿ ಮುಕ್ಕಾಲುಅಂತ ಹೇಳೋದು ಇದಕ್ಕೆ ಇರಬೇಕು. ತರ್ಕಕ್ಕೊಳಪಡಿಸದೆ ಏನನ್ನೂ ಒಪ್ಪಬೇಡಿ ಎಂದು ನಮ್ಮ ಪುಸ್ತಕದ ಓದು ಹೇಳಿಕೊಟ್ಟರೆ, ಮಾನವೀಯತೆಯ ಸೆಲೆ ತರ್ಕಕ್ಕಿಂತ ಶ್ರೇಷ್ಠ ಎಂದು ಜನಪದರ ಬದುಕು ಹೇಳಿಕೊಡುತ್ತದೆ. ಜೋಕುಮಾರಸ್ವಾಮಿ ಎಂಬ ನೆಲದ ನಂಟಿನ ದೇವರ ಬಗ್ಗೆ ತಿಳಿದುಕೊಂಡ ಖುಷಿ, ಅದನ್ನೆಲ್ಲರಿಗೂ ತಿಳಿಸಬೇಕೆಂಬ ಹಂಬಲ ನನ್ನನ್ನು ಲೇಖನಕ್ಕೆ ಪ್ರೇರೇಪಿದವು. ಮುಂದಿನ ಪೀಳಿಗೆಗೆ ಇಂಥ ಮಾನವೀಯ ಸಂದೇಶಗಳು ತಲುಪಬೇಕು. ಅದಕ್ಕೇ ಅಲ್ವೇ ಜನಪದರು ಹೇಳೋದು:
ಬೀದಿ ಮಕ್ಕಳು ಬೆಳೆದೋ
ಕ್ವಾಣಿ ಮಕ್ಕಳು ಕೊಳೆತೋ

Comments

  1. . ‘ಓದು ಒಕ್ಕಾಲು; ಬುದ್ಧಿ ಮುಕ್ಕಾಲು’

    ReplyDelete
  2. ಈ ಸೀಜನ್ನಿನ ಸೂಕ್ತ ಲೇಖನ 👌

    ReplyDelete
  3. ಜನಪದ ಸಾಹಿತ್ಯ ಎಂಬುವುದು ಇಂದು ಮರೆಯಾಗುತ್ತಿದೆ. ಅದಕ್ಕೆ ನೀವು ಮರು ಜೀವಂತಿಕ್ಕೆ ಕೊಡುತ್ತಿರುವುದು ಸಂತೊಷದ ಸಂಗತಿ....

    ReplyDelete
  4. ಚಂದ ಇದೆ ಸರ್. ನಮ್ ಊರಿನ್ಯಾಗ ಈ ದಿನದಾಗ ಊರಮ್ಮನ ಗುಡಿ ಮುಂದ ಜೋಕಪ್ಪನ ಪೂಜೆ ಮಾಡಿ ಎಡಿ ಹೊಲಕ್ಕ ಕಳುಸಿ, ಅಂಬ್ಲಿ ಮಜ್ಜಿಗೆ ಊರ ಜನಕ್ಕೆ ಹಂಚೋದು ಈ ಲೇಖನ ಓದಿ ನೆನಪಾಯ್ತು. ಮಣ ಮಣ ಸಾವಿರ ಅರ್ಥವಾಗದ ಮಂತ್ರಗಳ ಜಪಿಸಿ ಜನಸಾಮಾನ್ಯರನ್ನು ದೇವರಿಂದ ದೂರವಿಡುವ ಮೂಢಾಚರಣೆಗಳಿಗೂ, ಪ್ರಕೃತಿಯೊಟ್ಟಿಗಿನ ಸಂಬಂಧವನ್ನು ಬೆಚ್ಚಗಿರಿಸಿ ಕೃಷಿ ಕೃತ್ಯ ಕಾಯಕ ಸಂಸ್ಕೃತಿಗಳೊಟ್ಟಿಗೆ ಬೆಸೆದುಕೊಂಡ ಜನಪದ ಸಂಪ್ರದಾಯಗಳಿಗೂ ಎಷ್ಟು ವ್ಯತ್ಯಾಸ!

    ReplyDelete
  5. It's really good to know the mythical history and native affection towards it. Nice sir

    ReplyDelete
  6. Sir ನಂಗೆ ಜಾನಪದ ಮೇಲೆ master degree ಮಾಡಬೇಕು ಅನೋ ಆಸೆ ಸರ್ plz suggeste me

    ReplyDelete

Post a Comment